ಕುಶಾಲನಗರ, ಡಿ. 11: ಬೆಂಗಳೂರಿನಿಂದ ಹೊರಟ ಸೈಕಲ್ ರ್ಯಾಲಿ ತಂಡ ಸೋಮವಾರ ಸಂಜೆ ಕುಶಾಲನಗರ ತಲುಪಿದೆ. ಸೈಕಲ್ ಸವಾರಿಯನ್ನು ಜನಪ್ರಿಯಗೊಳಿಸಲು ರೈಡ್ ಎ ಸೈಕಲ್ ಪ್ರತಿಷ್ಠಾನ ಕೈಗೊಂಡಿರುವ 10ನೇ ವರ್ಷದ ಟೂರ್ ಆಫ್ ನೀಲಗಿರೀಸ್ ಸೈಕಲ್ ಯಾತ್ರೆ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸಾವಿರಕ್ಕೂ ಅಧಿಕ ಕಿಮೀ ದೂರದ ಸವಾರಿ ಕೈಗೊಳ್ಳುವ ಮೂಲಕ ಸೈಕಲ್ ಸವಾರಿಯನ್ನು ಜನಪ್ರಿಯಗೊಳಿಸಲು ಕಾರ್ಯಕ್ರಮ ರೂಪಿಸಿದೆ.

ಬೆಂಗಳೂರಿನಿಂದ ಪ್ರವಾಸ ಆರಂಭಿಸಿರುವ ನೂರಾರು ಸೈಕ್ಲಿಷ್ಟ್‍ಗಳು ಮೈಸೂರು, ಮಡಿಕೇರಿ, ಸುಲ್ತಾನ್ ಬತ್ತೇರಿ, ಊಟಿ ಮೂಲಕ ಸಾಗಿ ಮತ್ತೆ ಮೈಸೂರಿಗೆ ಹಿಂತಿರುಗಲಿದ್ದಾರೆ. ಜನಸಾಮಾನ್ಯರಲ್ಲಿ ಸೈಕಲ್ ಬಗ್ಗೆ ಉತ್ತೇಜನ ನೀಡಲು ಟೂರ್ ಆಫ್ ನೀಲಗಿರೀಸ್ ಆಯೋಜನೆ ಮಾಡುತ್ತಿದೆ. ಒಟ್ಟು 128 ಸೈಕ್ಲಿಷ್ಟ್‍ಗಳ ಪೈಕಿ ರಾಷ್ಟ್ರಮಟ್ಟದ ಹಾಗೂ ಸೈಕ್ಲಿಂಗ್‍ನಲ್ಲಿ ಒಲಿಂಪಿಕ್ ಪದಕ ಗಳಿಸಿದ ಅಮೇರಿಕ ಮೂಲದ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಸ್ಟ್ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಬೆಂಗಳೂರಿನ ಕಿರಣ್ ಕುಮಾರ್, ರಾಜು, ಡಾ ಶ್ರೀನಿವಾಸ್, ಗೋಕುಲ್‍ನಾಥ್, ಮತ್ತಿತರರು ಈ ತಂಡದಲ್ಲಿದ್ದಾರೆ ಎಂದು ಸೈಕಲ್ ಪ್ರವಾಸದ ನಿರ್ದೇಶಕ ಸತೀಶ್ ಬೆಳವಾಡಿ ತಿಳಿಸಿದ್ದಾರೆ.

ಉದಯೋನ್ಮುಖ ಸೈಕ್ಲಿಸ್ಟ್ ಪ್ರತಿಭೆಗಳನ್ನು ಗುರುತಿಸಿ ಸಂಸ್ಥೆ ವತಿಯಿಂದ ವಿಶ್ವದಾದ್ಯಂತ ಸೈಕಲ್ ತುಳಿಯುವ ಯೋಜನೆ ಹಮ್ಮಿಕೊಳ್ಳಲಾಗುವದೆಂದು ಈ ಸಾಲಿನ ಯಾತ್ರೆಯ ಪ್ರಮುಖರಾದ ಬದರಿನಾಥ್ ವಿ ಶಾಸ್ತ್ರಿ ತಿಳಿಸಿದ್ದಾರೆ. 128 ಸೈಕ್ಲಿಸ್ಟ್‍ಗಳ ಪೈಕಿ 120 ಮಂದಿ ಪುರುಷರು, 8 ಮಂದಿ ಮಹಿಳೆಯರು ತಂಡದಲ್ಲಿದ್ದಾರೆ. ಇವರಲ್ಲಿ 110 ಮಂದಿ ಭಾರತದ ವಿವಿಧೆಡೆಗಳಿಂದ ಪಾಲ್ಗೊಂಡಿದ್ದು ಉಳಿದಂತೆ 18 ಮಂದಿ ನೆದರ್‍ಲ್ಯಾಂಡ್, ಜರ್ಮನಿ, ಸ್ವೀಡನ್, ಡೆನ್ಮಾರ್ಕ್, ಆಸ್ಟ್ರೇಲಿಯಾ, ರಷ್ಯಾ, ಅಮೇರಿಕ ದೇಶಗಳ ಸೈಕ್ಲಿಸ್ಟ್‍ಗಳು ರ್ಯಾಲಿಯಲ್ಲಿದ್ದು 1 ಸಾವಿರ ಕಿಮೀ ದೂರ ಕ್ರಮಿಸುವ ಮೂಲಕ ಸೈಕಲ್ ಸವಾರಿ ಸಂಸ್ಕøತಿಯನ್ನು ಪಸರಿಸಲಿದ್ದಾರೆ.