ಒಡೆಯನಪುರ, ಡಿ. 10: ಶ್ವಾನ ಸೇರಿದಂತೆ ಮನೆಯಲ್ಲಿ ಸಾಕುವ ಪ್ರತಿಯೊಂದು ಸಾಕು ಪ್ರಾಣಿಗಳಿಗೆ ರೋಗ ನಿರೋಧಕ ರೇಬೀಸ್ ಲಸಿಕೆಗಳನ್ನು ಹಾಕುವದರ ಮೂಲಕ ಕಾಯಿಲೆಯನ್ನು ತಡೆಗಟ್ಟಲು ಸಾಧ್ಯ ವಾಗುತ್ತದೆ ಎಂದು ಪಶುಪಾಲನಾ ಇಲಾಖೆಯ ಸೋಮವಾರಪೇಟೆ ತಾಲೂಕು ಸಹಾಯಕ ನಿರ್ದೇಶಕ ಡಾ.ಬಿ.ಸಿ.ಚೆಟ್ಟಿಯಪ್ಪ ಅಭಿಪ್ರಾಯ ಪಟ್ಟರು. ಅವರು ಗುಡುಗಳಲೆ ಜಾತ್ರಾ ಮೈದಾನದಲ್ಲಿ ಶನಿವಾರಸಂತೆ ರೋಟರಿ ಕ್ಲಬ್, ಹಂಡ್ಲಿ ಗ್ರಾ.ಪಂ. ಹಾಗೂ ತಾಲೂಕು ಪಶು ಪಾಲನಾ ಇಲಾಖೆ ವತಿಯಿಂದ ಹಮ್ಮಿ ಕೊಂಡಿದ್ದ ಸಾಕು ನಾಯಿ ಹಾಗೂ ಬೆಕ್ಕುಗಳಿಗೆ ಹುಚ್ಚು ನಿವಾರಕ (ರೇಬೀಸ್) ಉಚಿತ ಲಸಿಕಾ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿ ದ್ದರು. ಸಾಕು ಪ್ರಾಣಿಗಳಲ್ಲಿ ಮನೆಗಳಲ್ಲಿ ಪ್ರತಿಯೊಬ್ಬರೂ ಶ್ವಾನವನ್ನು ಸಾಕುತ್ತಾರೆ, ಆದರೆ ನಾಯಿಗಳಿಗೆ ರೇಬೀಸ್ ಸೊಂಕು ತಗಲುವದ್ದರಿಂದ ರೇಬೀಸ್ ಕಾಯಿಲೆ ಹರಡುತ್ತದೆ, ರೇಬೀಸ್ ನಾಯಿಗಳ ಜೊಲ್ಲುರಸದಲ್ಲಿ ಉತ್ಪತ್ತಿಯಾಗುತ್ತದೆ, ಇಂತಹ ಸಾಕು ಪ್ರಾಣಿಗಳು ಮನುಷ್ಯನಿಗೆ ಕಚ್ಚುವ ಸಂದರ್ಭದಲ್ಲಿ ಮನುಷ್ಯನಿಗೂ ರೇಬೀಸ್ ಸೊಂಕು ತಗುಲಿ ಮನುಷ್ಯನೂ ಮರಣ ಹೊಂದುತ್ತಾರೆ ಎಂದರು.

ಶನಿವಾರಸಂತೆಯ ಮಕ್ಕಳ ತಜ್ಞ ಡಾ. ಆರ್.ವಿ. ಚಿದಾನಂದ್ ಮಾತನಾಡಿ, ನಾಗರಿಕ ಪ್ರಪಂಚದಲ್ಲಿ ಮನುಷ್ಯ ಮತ್ತು ಸಾಕು ಪ್ರಾಣಿಗಳ ಮಧ್ಯೆ ಒಡನಾಟ ಹೆಚ್ಚಾಗುತ್ತದೆ, ಅದರಲ್ಲೂ ಶ್ವಾನ ಮತ್ತು ಬೆಕ್ಕುಗಳ ಮಧ್ಯೆ ಒಡನಾಟ ಹೆಚ್ಚಾಗಿರುತ್ತದೆ, ಆದರೆ ಶ್ವಾನಕ್ಕೆ ಬಹುಬೇಗ ರೇಬೀಸ್ ಕಾಯಿಲೆ ಬರುತ್ತದೆ ಇದರಿಂದ ಮನುಷ್ಯನಿಗೂ ಅಷ್ಟೆ ವೇಗವಾಗಿ ರೇಬೀಸ್ ಸೊಂಕು ತಗಲುತ್ತದೆ ಎಂದರು. ಪ್ರಾಣಿಗಳು ಕಚ್ಚುವಂತಹ ಸಂದರ್ಭದಲ್ಲಿ ತಡ ಮಾಡದೆ ಹತ್ತಿರದ ವೈದ್ಯರಲ್ಲಿ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಿಸಿ ಕೊಳ್ಳಬೇಕು, ಸಂಘ-ಸಂಸ್ಥೆಗಳು ಶ್ವಾನ, ಬೆಕ್ಕು ಮುಂತಾದ ಸಾಕು ಪ್ರಾಣಿಗಳಿಗೆ ರೇಬೀಸ್ ಲಸಿಕಾ ಶಿಬಿರಗಳನ್ನು ಹಮ್ಮಿಕೊಳ್ಳುವದ್ದರಿಂದ ರೇಬೀಸ್ ಕಾಯಿಲೆಯನ್ನು ನಿಯಂತ್ರಿಸಬಹುದೆಂದರು. ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ.ನಾಗರಾಜ್ ಮಾತನಾಡಿ, ಶ್ವಾನ ಪ್ರೀಯರು ಕೇವಲ ನಾಯಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಸಾಲದು, ಇದರ ಜೊತೆಯಲ್ಲಿ ಶ್ವಾನ ಮತ್ತು ಬೆಕ್ಕುಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ಹಾಕಿಸುತ್ತಿರಬೇಕು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್. ವಸಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಸಂದೀಪ್, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಎಚ್.ವಿ. ದಿವಾಕರ್, ರೋಟರಿ ಪ್ರಮುಖರಾದ ಎಸ್.ಎಸ್. ಸಾಗರ್, ಎ.ಡಿ. ಮೋಹನ್ ಕುಮಾರ್, ಟಿ.ಆರ್. ಪುರುಷೋತ್ತಮ್, ಯಶ್ವಂತ್, ರೋಶನ್, ಶ್ವೇತ ವಸಂತ್, ಟಿ.ವಿ. ಜಯಸ್ವಾಮಿ, ಚಂದನ್, ಜಿತೇಂದ್ರ, ಭರತ್, ಡಾ.ಶೈಲ ಮುಂತಾದವರು ಇದ್ದರು.

-ವಿ.ಸಿ.ಸುರೇಶ್ ಒಡೆಯನಪುರ