ಮಡಿಕೇರಿ, ಡಿ.10 : ವಿಯೆಟ್ನಾಂನಿಂದ ಆಮದಾಗುತ್ತಿದ್ದ ಕರಿಮೆಣಸಿನ ವ್ಯವಹಾರದಿಂದಾಗಿ ಕೊಡಗಿನ ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದ ಬಗ್ಗೆ ಮನವರಿಕೆ ಮಾಡಿಕೊಂಡ ಕೇಂದ್ರ ಸರ್ಕಾರ ಸಕಾಲದಲ್ಲಿ ಸ್ಪಂದಿಸಿ ಕರಿಮೆಣಸಿಗೆ ಕೆ.ಜಿ.ಯೊಂದಕ್ಕೆ 500 ರೂ. ಆಮದು ಶುಲ್ಕ ವಿಧಿಸುವ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸಿದೆ. ಇದಕ್ಕೆ ಕಾರಣಕರ್ತ ಕೇಂದ್ರ ಸರ್ಕಾರ ಸೇರಿದಂತೆ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಸಂಸದರು ಅಭಿನಂದನಾರ್ಹರು ಎಂದು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೈಗೊಂಡ ಆಮದು ನೀತಿಯಿಂದಾಗಿ ಈಗ ಬೆಳೆÉಗಾರರಿಗೆ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿದರು. ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾಡಿದ ತಪ್ಪನ್ನು ಇಂದು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಸರಿಪಡಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ಜಾಹೀರಾತು ನೀಡಿರುವದರಲ್ಲಿ ಯಾವದೇ ತಪ್ಪಿಲ್ಲವೆಂದು ಭಾರತೀಶ್ ಸ್ಪಷ್ಟಪಡಿಸಿದರು.

ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ಕೇಂದ್ರದ ವಾಣಿಜ್ಯ ಸಚಿವರೊಂದಿಗೆ ವ್ಯವಹರಿಸಿ ಆಮದು ಕಾಳು ಮೆಣಸಿನಿಂದ ಕೊಡಗಿನ ಬೆಳೆಗಾರರು ಅನುಭವಿಸುತ್ತಿರುವ ಕಷ್ಟ ನಷ್ಟವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮವಾಗಿ ಆಮದು ಶುಲ್ಕವನ್ನು ವಿಧಿಸುವ ಮೂಲಕ ನ್ಯಾಯ ಒದಗಿಸಲಾಗಿದೆ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆಮದು ಕರಿಮೆಣಸಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಎಪಿಎಂಸಿ ಆಡಳಿತ ಮಂಡಳಿಯನ್ನು ಸಮರ್ಥಿಸಿಕೊಂಡರು. ಅಲ್ಲದೆ, ತನಿಖಾ ವರದಿಗಾಗಿ ಎದುರು ನೋಡುತ್ತಿರುವದಾಗಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ಕಾಮಗಾರಿ ವಿಳಂಬವಾಗಲು ಜಿಲ್ಲೆಯ ಶಾಸಕರುಗಳು ಸಿದ್ಧಪಡಿಸಿದ್ದ ಕಾಮಗಾರಿಯ ಪಟ್ಟಿಯನ್ನು ಕಾಂಗ್ರೆಸ್ಸಿಗರು ತಿದ್ದುಪಡಿ ಮಾಡಿರುವದೇ ಕಾರಣವೆಂದು ಆರೋಪಿಸಿದರು. ಜನಪರವಾಗಿ ಯಾವ ಪ್ರದೇಶದಲ್ಲಿ ಯಾವ ಕಾಮಗಾರಿ ನಡೆಯಬೇಕು ಎನ್ನುವದನ್ನು ಶಾಸಕರು ನಿರ್ಧರಿಸಿ ಅಂತಿಮ ಪಟ್ಟಿ ತಯಾರಿಸುತ್ತಾರೆ. ಆದರೆ, ಇದರಲ್ಲಿ ಮಧ್ಯಪ್ರವೇಶ ಮಾಡುತ್ತಿರುವ ಕಾಂಗ್ರೆಸ್ ನಾಯಕರು ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕರ್ತರಿರುವ ಪ್ರದೇಶದಲ್ಲೆ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಎಲ್ಲರಿಗೂ ರಸ್ತೆ ಸೌಲಭ್ಯ ಸಿಗಬೇಕೆನ್ನುವದು ಬಿಜೆಪಿಯ ಉದ್ದೇಶವಾಗಿದೆ ಎಂದು ಬಿ.ಬಿ. ಭಾರತೀಶ್ ತಿಳಿಸಿದರು.

ಬಿಜೆಪಿ ಪ್ರತಿಭಟನಾ ಜಾಥ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ ನಂತರ ಮಡಿಕೆÉೀರಿ ಭಾಗಮಂಡಲ ರಸ್ತೆಯ ದುರಸ್ತಿ ಕಾರ್ಯದ ವಿಚಾರದಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾದರೆ ಮಾತ್ರ ಕಾಮಗಾರಿಗಳಿಗೆ ಚಾಲನೆ ದೊರೆಯುತ್ತದೆಯೇ? ಎಂದು ಪ್ರಶ್ನಿಸಿದ ಭಾರತೀಶ್, ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿ ಕಾರ್ಯಗಳ ಪರವಾಗಿ ಯಾವದೇ ಸಭೆಗಳನ್ನು ನಡೆಸಿಲ್ಲವೆಂದು ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕೊಡಗು ಜಿಲ್ಲೆಗೆ ಅನುದಾನ ಸುಲಲಿತವಾಗಿ ಬರುತ್ತಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಕೊಡಗು ಜಿಲ್ಲೆÉಯ ಬಹುತೇಕ ಎಲ್ಲಾ ಜನಪ್ರತಿನಿಧಿಗಳು ಬಿಜೆಪಿಯವರು ಎನ್ನುವ ಕಾರಣಕ್ಕಾಗಿ ಅನುದಾನವನ್ನು ನೀಡುತ್ತಿಲ್ಲವೆಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಉಪಾಧ್ಯಕ್ಷೆ ಮೋಂತಿ ಗಣೇಶ್, ಖಜಾಂಚಿ ಮೋಹನ್ ಮೊಣ್ಣಪ್ಪ ಹಾಗೂ ನಗರಾಧ್ಯಕ್ಷ ಮಹೇಶ್ ಜೈನಿ ಉಪಸ್ಥಿತರಿದ್ದರು.