ಸೋಮವಾರಪೇಟೆ,ಡಿ.10: ಶೈಕ್ಷಣಿಕ ಸಾಧನೆ ಹಾಗೂ ಸತತ ಪರಿಶ್ರಮದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಉಪ್ಪಾರ ಸಮುದಾಯ ಸಂಘಟನಾತ್ಮಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಬಾಣೆಯ ಸಮುದಾಯಭವನದಲ್ಲಿ ಉಪ್ಪಾರ ಭಗೀರಥ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ್ಪಾರ ಭಗೀರಥ ಸಂಘದ ಅಧ್ಯಕ್ಷ ಕ್ಯಾತಶೆಟ್ಟಿ ಮಾತನಾಡಿ, ನಮ್ಮ ಜನಾಂಗಕ್ಕೆ ಸರಕಾರದಿಂದಲೂ ಅನೇಕ ಸವಲತ್ತುಗಳು ಸಿಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹ ಸಿಗುತ್ತಿದೆ. ಸರಕಾರದ ಸವಲತ್ತು ಸೇರಿದಂತೆ ತಮ್ಮ ಸಮಸ್ಯೆಗಳನ್ನು ನೀಗಿಸಿಕೊಳ್ಳುವ ನಿಟ್ಟಿನಲ್ಲಿ ಒಗ್ಗಟು ಅತೀ ಮುಖ್ಯವಾಗಿದೆ. ಉಪ್ಪಾರ ಜನಾಂಗದ ಪ್ರತಿಯೊಂದು ಕುಟುಂಬಗಳು ಸಂಘಟನೆಯೊಂದಿಗೆ ಕೈ ಜೋಡಿಸಿ, ತಮ್ಮ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ವೇದಿಕೆಯಲ್ಲಿ ಕರವೇ ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಜಾನಪದ ಪರಿಷತ್ತಿನ ಸೋಮವಾರಪೇಟೆ ಹೋಬಳಿ ಘಟಕದ ಕಾರ್ಯದರ್ಶಿ ಎಂ.ಎ. ರುಬೀನಾ, ಉಪಾಧ್ಯಕ್ಷ ನ.ಲ. ವಿಜಯ, ಐಎನ್‍ಟಿಯುಸಿಯ ಜಿಲ್ಲಾ ಘಟಕದ ಅಶ್ರಫ್, ಗಣೇಶ್, ಉಪ್ಪಾರ ಭಗೀರಥ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ರವಿ, ಉಪಾಧ್ಯಕ್ಷೆ ಜಯ ರಮೇಶ್, ಸಹಕಾರ್ಯದರ್ಶಿ ವನಿತಾ ಆನಂದ್, ಖಜಾಂಚಿ ಶಿವಕುಮಾರ್ ಉಪಸ್ಥಿತರಿದ್ದರು.