ವೀರಾಜಪೇಟೆ, ಡಿ. 10: ವೀರಾಜಪೇಟೆಯ ರಾಜ್ಯ ಹೆದ್ದಾರಿ ಮೀನುಪೇಟೆಯಲ್ಲಿ ಕಾನೂನನ್ನು ಉಲ್ಲಂಘಿಸಿ ಮೋಬೈಲ್ ಟವರ್ ನಿರ್ಮಾಣ ಮಾಡುತ್ತಿರುವದರ ವಿರುದ್ಧ ಅಲ್ಲಿನ ನಿವಾಸಿಗಳ ಪರವಾಗಿ ಎ.ಎಂ.ಸೋಮಣ್ಣ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ

(ಎ.ಸಿ.ಬಿ.)ಕ್ಕೆ ಹಾಗೂ ನಗರ ಪೊಲೀಸರಿಗೂ ದೂರು ನೀಡಿದ್ದಾರೆ.

ಮೀನುಪೇಟೆಯ ನಬೀಶ ಎಂಬವರಿಗೆ ಸೇರಿದ 30ವರ್ಷ ಹಳೆಯದಾದ ಆರ್.ಸಿ.ಸಿ. ಕಟ್ಟಡದ ಒಂದನೇ ಅಂತಸ್ತಿನಲ್ಲಿ ಟವರ್ ನಿರ್ಮಾಣವಾಗುತ್ತಿದ್ದು ಕಟ್ಟಡ ಕಳಪೆಯಿಂದ ಕೂಡಿರುವದರಿಂದ ಟವರ್‍ಗೆ ಯಾವದೇ ಭದ್ರತೆ ಇಲ್ಲದಿರುವದರಿಂದ ದುರಂತ ಸಂಭವಿಸುವ ಸಾಧ್ಯತೆಗಳಿವೆ. ಈ ಟವರ್ ನಿರ್ಮಾಣಕ್ಕೆ ರಾಜ್ಯ ಹೆದ್ದಾರಿ ರಸ್ತೆಯ ಅಂತರವನ್ನು ಕಾಯ್ದುಕೊಂಡಿಲ್ಲ. ರಾಜ್ಯ ಹೆದ್ದಾರಿಯ ಎಲ್ಲ ರೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಟವರ್ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಟವರ್ ನಿರ್ಮಾಣ ಮುಂದುವರಿದಿದೆ. ಮೀನುಪೇಟೆ ಹೆದ್ದಾರಿ ರಸ್ತೆ ಮಾಕುಟ್ಟದ ಮಾರ್ಗವಾಗಿ ಕೇರಳ ರಾಜ್ಯವನ್ನು ಸಂಪರ್ಕಿಸಲಿದೆ ಎಂದು ಸೋಮಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆಯ ಮೀನುಪೇಟೆಯ ಕೆ.ಎನ್.ಸುಭದ್ರ ಎಂಬವರು ಟವರ್ ನಿರ್ಮಾಣದ ವಿರುದ್ಧ ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ ಮೇರೆಗೆ ಸ್ಥಳವನ್ನು ಪರಿಶೀಲಿಸಿದ ಅಧಿಕಾರಿಗಳು ಟವರ್ ನಿರ್ಮಾಣ ಕಾನೂನು ಉಲ್ಲಂಘನೆಯಾಗಿದ್ದು ರಾಜ್ಯ ಹೆದ್ದಾರಿ ಜಾಗವನ್ನು ಅತಿಕ್ರಮಿಸಲಾಗಿದೆ. ಕಟ್ಟಡದ ಕುರಿತು ಕಟ್ಟಡದ ಮಾಲೀಕ ನಬೀಶ ಅವರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಬೀಶ ವಿರುದ್ಧ ಟವರ್ ತೆರವು ಸಂಬಂಧದಲ್ಲಿ ವೀರಾಜಪೇಟೆ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರೆದಿರುವದನ್ನು ಇಲಾಖೆ ನೋಟೀಸ್‍ನಲ್ಲಿ ತಿಳಿಸಲಾಗಿದೆ.

ಲೋಕೋಪಯೋಗಿ ಅಧಿಕಾರಿಗಳ ಪ್ರಕಾರ ರಾಜ್ಯ ಹೆದ್ದಾರಿಯಲ್ಲಿ ಕಟ್ಟಡ, ಟವರ್‍ಗಳನ್ನು ನಿರ್ಮಿಸಬೇಕಾದರೆ ರಸ್ತೆಯ ಮಧ್ಯದ ಒಂದು ಭಾಗದಿಂದ 18ಮೀಟರ್ ಅಂತರವಿರಬೇಕು. ಈಗ ಟವರ್ ನಿರ್ಮಾಣದ ಕಟ್ಟಡ ಕೇವಲ 10.60 ಮೀಟರ್ ಅಂತರದಲ್ಲಿದೆ. ಟವರ್ ನಿರ್ಮಾಣಕ್ಕೆ ನಬೀಶ ಪಟ್ಟಣ ಪಂಚಾಯಿಂದಲೂ ಆಕ್ಷೇಪಣಾ ರಹಿತ ದೃಢೀಕರಣ ಪತ್ರ ಪಡೆದುಕೊಂಡಿಲ್ಲ ಎಂದು ಹೇಳಲಾಗಿದೆ. ಈ ಅಕ್ರಮ ಟವರ್ ನಿರ್ಮಾಣ ಸಂಬಂಧದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ದೂರುಗಳನ್ನು ನೀಡಿದರೂ ಯಾವದೇ ಕ್ರಮ ಕೈಗೊಂಡಿಲ್ಲ. ಇವರ ವಿರುದ್ಧವು ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ಎ.ಸಿ.ಬಿ.ಗೆ ದೂರು ನೀಡಲಾಗುವದು ಎಂದು ಸೋಮಣ್ಣ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.

ದೂರುದಾರ ಸುಭದ್ರ ವೀರಾಜಪೇಟೆಯ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಹೂಡಿರುವ ಖಾಸಗಿ ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ನಬೀಶ, ಪಿಡಬ್ಲ್ಯುಡಿ ಸಹಾಯಕ ಅಭಿಯಂತರ, ಮುಖ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ದೆಹಲಿಯ ಖಾಸಗಿ ಕಂಪೆನಿಯೊಂದು ನಬೀಶ ಅವರ ಕಟ್ಟಡದÀ ಒಂದನೇ ಅಂತಸ್ತಿನ ಜಾಗವನ್ನು ಬಾಡಿಗೆ ಒಪ್ಪಂದದ ಆಧಾರದಲ್ಲಿ ಪಡೆದು ಟವರ್ ನಿರ್ಮಾಣಕ್ಕೆ ಮುಂದಾಗಿದೆ.