ಸೋಮವಾರಪೇಟೆ, ಡಿ. 8: ಕೊಡಗಿನ ಸುಂದರ ಪರಿಸರ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಅಲ್ಲಲ್ಲಿ ತಲೆ ಎತ್ತುತ್ತಿರುವ ರೆಸಾರ್ಟ್‍ಗಳಿಗೆ ಕಡಿವಾಣ ಹಾಕಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಹೆಚ್ಚಿನ ರೆಸಾರ್ಟ್‍ಗಳಿಗೆ ಅನುಮತಿ ನೀಡಬಾರದು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜೀವ ವೈವಿಧ್ಯ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರವಾಸಿಗರು ಕೊಡಗಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಕೊಡಗಿನ ಪರಿಸರ ತಲೆ ಎತ್ತುತ್ತಿರುವ ರೆಸಾರ್ಟ್‍ಗಳಿಂದಾಗಿ ಹಾಗೂ ಕೃಷಿ ಭೂಮಿಯನ್ನು ರಾಜ್ಯ ಸರ್ಕಾರ ವಾಣಿಜ್ಯ ಬಳಕೆಗಾಗಿ ಪರಿವರ್ತನೆ ಮಾಡಿಕೊಡುತ್ತಿರುವದರಿಂದ ಹಾಳಾಗುತ್ತಿದೆ.

ಈ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ರೈತರು ಕೃಷಿಯಲ್ಲಿ ಸಾವಯವ ವಸ್ತುಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದರು. ಆದರೆ ಇಂದು ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿ ಪರಿಸರದೊಂದಿಗೆ ಆರೋಗ್ಯವೂ ಕೂಡ ಹಾಳಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈನಿಕ ಹುಳುಗಳು ಹಾಗೂ ಆಫ್ರಿಕನ್ ಶಂಕುಹುಳು ಸೇರಿದಂತೆ ಅನೇಕ ಕ್ರಿಮಿ ಕೀಟಗಳು ರೈತರಿಗೆ ತೊಂದರೆ ನೀಡುತ್ತಿದೆ. ಇದನ್ನೆಲ್ಲಾ ಆಹಾರವಾಗಿ ಬಳಸುತ್ತಿದ್ದ ಜೀವ ವೈವಿಧ್ಯಗಳಾದ ಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಸಂತತಿ ನಾಶವಾಗುತ್ತಿರುವದು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟರು.

ಕಾರ್ಯಾಗಾರದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಾಲೂಕು ಜೀವ ವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ಸುನಂದಕುಮಾರ್, ಸದಸ್ಯ ಜೆ.ಪಿ.ರಾಜು, ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಉಪಸ್ಥಿತರಿದ್ದರು.