ಮಡಿಕೇರಿ, ಡಿ. 7: ಕೊಡಗು ಜಿಲ್ಲೆಯಲ್ಲಿ ಅಂಗನವಾಡಿಗಳು ಸೇರಿದಂತೆ ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೂರೈಕೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇಲಾಖೆಗೆ ಕಾಯಕಲ್ಪ ನೀಡಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಸ್ಪಷ್ಟಪಡಿಸಿದ್ದಾರೆ.

ಅಂಗನವಾಡಿಗಳಿಗೆ ಹಾಗೂ ಶಿಶುಗಳ ಸಹಿತ ಹೆಣ್ಣು ಮಕ್ಕಳು, ಮಹಿಳೆಯರಿಗೆ ಇಲಾಖೆಯಿಂದ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆಗೆ ಒತ್ತು ನೀಡುತ್ತಿರುವದಾಗಿ ಜಿಲ್ಲಾಧಿಕಾರಿ ಡಿಸೋಜ ಸ್ಪಷ್ಟಪಡಿಸಿದರು.

ಸಂಬಂಧಿಸಿದ ಇಲಾಖೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ನಡುವೆ ಸಾಧ್ಯವಿರುವ ಮಟ್ಟಿಗೆ ಪ್ರಬಾರ ಮಹಿಳಾ ಅಧಿಕಾರಿಯಿಂದ ಕೆಲಸ ನಿರ್ವಹಿಸಲು ನಿರ್ದೇಶಿಸಿದ್ದು, ಒಂದು ವೇಳೆ ಪೌಷ್ಟಿಕ ಆಹಾರದಲ್ಲಿ ಕಳಪೆ ಪೂರೈಕೆಯಿದ್ದರೆ ಫಲಾನುಭವಿಗಳು ಅಥವಾ ಸಾರ್ವಜನಿಕರು ತಮಗೆ ದೂರು ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.

ತನಿಖೆಗೆ ಒತ್ತಾಯ: ಮಡಿಕೇರಿಯ ಬಾಲಕಿಯರ ಬಾಲ ಮಂದಿರದ ಮೇಲ್ವಿಚಾರಕಿ ಮಮ್ತಾಜ್ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಬಾರ ಉಪನಿರ್ದೇಶಕರಾಗಿ ನೇಮಿಸಿರುವ ಬಗ್ಗೆ ಆಕ್ಷೇಪಿಸಿರುವ ಕೋಟೆ ಮಹಿಳಾ ವಿವಿಧೋದ್ದೇಶ ಸಹಕಾರ ಸಮಾಜವು, ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಕೆ ಸಂಬಂಧ ಲೋಕಾಯುಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹೇಳಿಕೆ ನೀಡಿದೆ.

ಜನತಾ ಬಜಾರ್ ಆರೋಪ: ಪ್ರಬಾರ ಅಧಿಕಾರಿ ಮಮ್ತಾಜ್ ಅವರೇ 14.8.2017ರಂದು ಜನತಾ ಬಜಾರ್‍ನಿಂದ, 2016ರ ಅವಧಿಯಿಂದ ತಮ್ಮ ಇಲಾಖೆಯ ಮಕ್ಕಳ ರಕ್ಷಣಾ ಘಟಕಕ್ಕೆ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿ ಸರಬರಾಜುಗೊಳಿಸಿರುವದಾಗಿ ದೃಢೀಕರಿಸಿರುವ ಆದೇಶ ಪತ್ರವನ್ನು ಬಿಡುಗಡೆಗೊಳಿಸಿದೆ. ಹೀಗಿರುವಾಗ ಜನತಾ ಬಜಾರ್‍ನಿಂದ ಕಳಪೆ ಆಹಾರ ಪೂರೈಕೆ ಮಾಡಿರುವದಾಗಿ ಈ ಅಧಿಕಾರಿ ಮಾಡಿರುವ ಆರೋಪ ಕುರಿತು ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ಈ ಎಲ್ಲಾ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಫಲಾನುಭವಿಗಳ ಹಿತದೃಷ್ಟಿಯಿಂದ ಸೂಕ್ತ ಅಧಿಕಾರಿಯೊಬ್ಬರಿಗೆ ಶೀಘ್ರವೇ ಹೊಣೆಗಾರಿಕೆ ನೀಡುವದಾಗಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಸಿಬ್ಬಂದಿ ಕೊರತೆ ಬಗ್ಗೆ ಸರಕಾರದ ಗಮನ ಸೆಳೆದಿರುವದಾಗಿ ‘ಶಕ್ತಿ’ಯೊಂದಿಗೆ ವಿವರಿಸಿದ್ದಾರೆ.