ಶ್ರೀಮಂಗಲ, ಡಿ. 7: ಕಳೆದ 36 ದಿನಗಳಿಂದ ಪೊನ್ನಂಪೇಟೆ ತಾಲೂಕು ಪುನರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಪ್ರತಿಭಟನೆಗೆ ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದವರು ಬೆಂಬಲವನ್ನು ವ್ಯಕ್ತಪಡಿಸಿ ಭಾಗವಹಿಸಿದರು.
ಈ ಸಂದರ್ಭ ಮಾತನಾಡಿದ ಹಿರಿಯ ರಂಗಕರ್ಮಿ ಅಡ್ಡಂಡ ಸಿ.ಕಾರ್ಯಪ್ಪ ಕೊಡಗು ಸಿ ಸ್ಟೇಟ್ ಆಗಿದ್ದಂತಹ ಸಂದರ್ಭದಲ್ಲಿ 24 ತಾಲೂಕುಗಳನ್ನು ಮತ್ತು 24 ಶಾಸಕರನ್ನು ಕೊಡಗು ಜಿಲ್ಲೆ ಹೊಂದಿತ್ತು. 1956 ರಿಂದ 57ರವರೆಗೆ ಕರ್ನಾಟಕ ವಿಧಾನ ಸಭೆಯಲ್ಲಿ 24 ಶಾಸಕರನ್ನು ಕೊಡಗು ಜಿಲ್ಲೆ ಹೊಂದಿತ್ತು. ಇದರೊಂದಿಗೆ ಹಂಗಾಮಿ ಸ್ಪೀಕರ್ ಆಗಿ ಕುಶಾಲಪ್ಪನವರು ಕಾರ್ಯ ನಿರ್ವಹಿಸಿದ್ದರು. ಇದೀಗ 24 ತಾಲೂಕುಗಳನ್ನು ಕಳೆದುಕೊಂಡು ಮೂರು ತಾಲೂಕಾಗಿ ಕೊಡಗನ್ನು ವಿಭಜನೆ ಮಾಡಿ ತರುವಾಯ 2 ವಿಧಾನ ಸಭಾ ಕ್ಷೇತ್ರಗಳಾಗಿ ವಿಂಗಡಣೆ ಮಾಡಿ ಕೊಡಗಿನ ಮೇಲೆ ನಿರಂತರ ಅನ್ಯಾಯವನ್ನು ಮಾಡಲಾಗುತ್ತಿದೆ. ಪೊನ್ನಂಪೇಟೆ ತಾಲೂಕು ಪುನರಚನೆಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ತಾಲೂಕು ಪುನರಚನೆ ಸಮಿತಿಯ ಅಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಒಂದು ವೇಳೆ ತಾಲೂಕು ರಚನೆಗೆ ಸರ್ಕಾರ ಮುಂದಾಗದಿದ್ದರೆ ಉಗ್ರ ಹೋರಾಟವನ್ನು ಮಾಡುವ ದಿಸೆಯಲ್ಲಿ ಹಾಗೂ ಕಾನೂನು ಹೋರಾಟಕ್ಕೆ ಕೇಂದ್ರ ಸಮಿತಿಯೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿ ಸರ್ಕಾರ ಪೊನ್ನಂಪೇಟೆ ತಾಲೂಕು ರಚನೆಗೆ ಮುಂದಾಗದಿದ್ದರೆ ವಿವಿಧ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಪಕ್ಷದಿಂದ ಹೊರಗುಳಿದು ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಹಾಗೂ ವಿವಿಧ ಪಕ್ಷದ ನಾಯಕರುಗಳ ಮೇಲೆ ಒತ್ತಡವನ್ನು ಹಾಕಬೇಕು ಎಂದು ಕರೆ ನೀಡಿದರು.
ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗದ ಪರವಾಗಿ ಮಾತನಾಡಿದ ಮುದ್ದಿಯಡ ಮಂಜು ಗಣಪತಿ ಎಲ್ಲಾ ಮೂಲ ಸೌಕರ್ಯಗಳು, ಮಾನದಂಡಗಳನ್ನು ಹೊಂದಿರುವ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರ ಮೀನ ಮೇಷ ಎಣಿಸುತ್ತಿರುವದು ಸರಿಯಲ್ಲ. ಪೊನ್ನಂಪೇಟೆ ತಾಲೂಕು ರಚನೆಗೆ ಮುಂದಾಗದಿದ್ದರೆ 21 ಗ್ರಾ.ಪಂ ವ್ಯಾಪ್ತಿಯ ಮತದಾರರು ಮತದಾನ ಬಹಿಷ್ಕಾರ ಮಾಡುವಂತೆ ಹಾಗೂ ಪ್ರತಿಭಟನೆ ಮತ್ತಷ್ಟು ಉಗ್ರ ರೂಪ ಪಡೆದುಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಕಾಯಪಂಡ ಸನ್ನಿ, ಪ್ರಮುಖರಾದ ಆಲೇಮಾಡ ನವೀನ್, ಆಲೇಮಾಡ ಸುಧೀರ್, ಗಾಂಡಂಗಡ ಕೌಶಿಕ್, ಮತ್ರಂಡ ಜಾಕಿ, ಚೆಪ್ಪುಡಿರ ಪೊನ್ನಪ್ಪ, ಆಲೇಮಾಡ ಸುನಿಲ್, ಚಿರಿಯಪಂಡ ಕಾಶಿಯಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೆಮ್ಮಂಡ. ಕೆ.ಪೊನ್ನಪ್ಪ, ಕಾಳಿಮಾಡ ಮೋಟಯ್ಯ, ನಾಗರಿಕ ಹೋರಾಟ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು, ಕೊಡಗು ಹಿತರಕ್ಷಣಾ ಬಳಗದ ಸದಸ್ಯರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.