ಸೋಮವಾರಪೇಟೆ,ಡಿ.7: ನೆರೆಯ ಹಾಸನ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಬಿಸ್ಲೆ ಗ್ರಾಮದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆ ತಾಲೂಕಿನ ಐವರ ವಿರುದ್ಧ ಹಾಸನ ಜಿಲ್ಲೆ, ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯಕ್ಕೆ ತೆರಳುವ ಮಾರ್ಗದಲ್ಲಿರುವ ಬಿಸ್ಲೆ ಗ್ರಾಮದ ಅರಣ್ಯ ತನಿಖಾ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಅಶೋಕ್ ಮತ್ತು ನಾಗರಾಜ್ ಎಂಬವರುಗಳ ಮೇಲೆ ಸೋಮವಾರಪೇಟೆಯ ತಾಕೇರಿ ಗ್ರಾಮದ ಕುಶಾಲಪ್ಪ, ಅಶೋಕ, ದಿನೇಶ್, ತೇಜಸ್, ಧನು ಅವರುಗಳು ಹಲ್ಲೆ ನಡೆಸಿದ್ದಾರೆ.
ಇಲ್ಲಿಂದ ಸುಬ್ರಹ್ಮಣ್ಯಕ್ಕೆ ಮೊನ್ನೆ ದಿನ ಮಧ್ಯರಾತ್ರಿ ತೆರಳುತ್ತಿದ್ದ ಐವರ ತಂಡವನ್ನು ಬಿಸ್ಲೆ ಅರಣ್ಯ ತಪಾಸಣಾ ಗೇಟ್‍ನ ಬಳಿ ತಡೆದ ಸಿಬ್ಬಂದಿಗಳು ವಿಚಾರಿಸಲು ಮುಂದಾಗಿದ್ದಾರೆ. ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದು ಐವರ ತಂಡ ಅರಣ್ಯ ಇಲಾಖಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಸಿಬ್ಬಂದಿಯ ಕೂಗಾಟ ಕೇಳಿದ ಸ್ಥಳೀಯ ನಿವಾಸಿಗಳು ಗೇಟ್‍ನ ಬಳಿ ಆಗಮಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಈ ಸಂದರ್ಭ ಸ್ಥಳೀಯರು ಓರ್ವನನ್ನು ಹಿಡಿದುಕೊಂಡು ಪರಾರಿಯಾದವರ ಬಗ್ಗೆ ಯಸಳೂರು ಅರಣ್ಯ ಕಚೇರಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕಾರಿನಲ್ಲಿ ತೆರಳುತ್ತಿದ್ದ ನಾಲ್ವರನ್ನು ಅಡ್ಡಗಟ್ಟಿ ವಶಕ್ಕೆ ಪಡೆಯಲು ಮುಂದಾದರು.
ಈ ಸಂದರ್ಭ ಧನು ಎಂಬಾತ ಕತ್ತಲಲ್ಲಿ ಓಡಿ ತಪ್ಪಿಸಿಕೊಂಡಿದ್ದು, ಕಾರಿನಲ್ಲಿದ್ದ ಕುಶಾಲಪ್ಪ, ಅಶೋಕ, ದಿನೇಶ್, ತೇಜಸ್ ಅವರುಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದರು. ಹಲ್ಲೆಯಿಂದ ಗಾಯಗೊಂಡ ಅರಣ್ಯ ವೀಕ್ಷಕ ಅಶೋಕ, ನಾಗರಾಜ್ ಅವರುಗಳು ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ತಾಲೂಕಿನ ಐವರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.