ಕೂಡಿಗೆ, ಡಿ. 7: ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದು, ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರಾವರಿಯಿಂದ ಹಾರಂಗಿಯಿಂದ ಕೊಡಗಿನ ಗಡಿಭಾಗದ ಗ್ರಾಮ ಶಿರಂಗಾಲದವರೆಗೆ ವಿವಿಧ ಹೈಬ್ರಿಡ್ ತಳಿಯ ಭತ್ತವನ್ನು ಬೆಳೆಯಲಾಗುತ್ತಿದ್ದು, ಭತ್ತವನ್ನು ಮಾರಾಟ ಮಾಡಲು ರೈತರು ಪರದಾಡುವಂತಾಗಿದೆ. ಈ ಹಿನ್ನೆಲೆ ಸೋಮವಾರಪೇಟೆ ತಾಲೂಕಿನಲ್ಲಿ ಭತ್ತದ ಖರೀದಿ ಕೇಂದ್ರವನ್ನು ತೆರೆದು, ಸೂಕ್ತ ಬೆಲೆಯನ್ನು ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಕಳೆದ ಸಾಲಿನಲ್ಲಿ ರೈತರು ಬೆಳದ ಭತ್ತವನ್ನು ಕಟಾವು ಮಾಡಿದ ಎರಡು ತಿಂಗಳ ನಂತರ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಆದರೆ, ಕೇಂದ್ರವು ಪ್ರಾರಂಭವಾಗಲು ತಡವಾದ ಪರಿಣಾಮ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಭತ್ತದ ದರದಲ್ಲಿ, ತೂಕದಲ್ಲಿ ಅನ್ಯಾಯವಾಗಿತ್ತು. ಆದ್ದರಿಂದ ಈ ಭಾರಿಯೂ ರೈತರಿಗೆ ಅನ್ಯಾಯವಾಗದಂತೆ ಭತ್ತ ಮಾರಾಟದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಂಬಂಧಪಟ್ಟ ಕೃಷಿ ಇಲಾಖೆ ಮತ್ತು ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಈ ಸಾಲಿನಲ್ಲಿ ಭತ್ತದ ಕಟಾವಿನ ಸಂದರ್ಭಕ್ಕೆ ಸರಿಯಾಗಿ ಭತ್ತದ ಖರೀದಿ ಕೇಂದ್ರವನ್ನು ಡಿಸೆಂಬರ್ ಮೊದಲ ವಾರದಿಂದಲೇ ಪ್ರಾರಂಭಿಸಿ ರೈತರಿಗೆ ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿ ರೈತರಿಂದ ಭತ್ತವನ್ನು ಖರೀದಿಸಿ, ರೈತರಿಗೆ ಅನ್ಯಾಯವಾಗದಂತೆ ತಡೆಯಲು ಮುಂದಾಗಬೇಕೆಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು, ಹೆಬ್ಬಾಲೆ, ಶಿರಂಗಾಲ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಈಗಾಗಲೇ ಕೆಲವು ಭಾಗಗಳಲ್ಲಿ ಭತ್ತದ ಬೆಳೆಯು ಕಟಾವಿಗೆ ಬಂದಿದ್ದು, ಕೆಲವು ರೈತರು ಈ ಅರೆಕಾಲಿಕ ಮಳೆಯಿಂದಾಗಿ ಭತ್ತವನ್ನು ಕಟಾವು ಮಾಡಿ ಕಣದಲ್ಲಿ ಹಾಕಲಾಗಿದೆ. ಈ ಸಾಲಿನಲ್ಲಿ ಮುಸುಕಿನ ಜೋಳದ ಖರೀದಿ ಕೇಂದ್ರವನ್ನು ರದ್ದು ಮಾಡಿರುವದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 3665 ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಮುಸುಕಿನ ಜೋಳವನ್ನು ಬೆಳೆಯಲಾಗಿದ್ದು, 300 ಕ್ಕೂ ಹೆಚ್ಚು ಲಾರಿಯ ಜೋಳವನ್ನು ಖರೀದಿಸುವ ನೆಪದಲ್ಲಿ ಮಧ್ಯವರ್ತಿಗಳು ದರ ಮತ್ತು ತೂಕದಲ್ಲಿ ವಂಚಿಸಿರುವ ಪ್ರಸಂಗಗಳು ನಡೆದಿವೆ. ಖರೀದಿ ಕೇಂದ್ರವನ್ನು ರದ್ದು ಮಾಡಿರುವದರಿಂದ ರೈತರಿಗೆ ಭಾರಿ ಅನ್ಯಾಯವಾಗಿದೆ. ಶೀಘ್ರವಾಗಿ ಸೋಮವಾರಪೇಟೆ ತಾಲೂಕಿನ ಒಂದು ಹೋಬಳಿ ಕೇಂದ್ರದಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರಯುವಂತೆ ತೊರೆನೂರು ಸಹಕಾರ ಸಂಘಧ ನಿರ್ದೇಶಕ ಕೆ.ಎಸ್. ಕೃಷ್ಣೇಗೌಡ, ತೊರೆನೂರು ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಚಂದ್ರಪ್ಪ, ಕೂಡಿಗೆ ಗ್ರಾ.ಪಂ.ನ ಸದಸ್ಯ ಟಿ.ಕೆ. ವಿಶ್ವನಾಥ್, ಮಂಜಯ್ಯ ಹಾಗೂ ರೈತ ಮುಖಂಡರು ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.