ಮಡಿಕೇರಿ, ಡಿ. 7: ಸರ್ಕಾರ ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ, ಮಾಧ್ಯಮ ಮಾನ್ಯತಾ ಪತ್ರ ಪಡೆಯದ ಪತ್ರಕರ್ತರಿಗೆ ಬಸ್‍ಪಾಸ್ ನೀಡುವ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ತಾ. 12 ರೊಳಗೆ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ ಇಲ್ಲಿಗೆ ಸಲ್ಲಿಸಬೇಕು.
ಅರ್ಹತೆಗಳು: ಅರ್ಜಿದಾರರು ಪ್ರತಿನಿಧಿಸುವ ಪತ್ರಿಕೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರಬೇಕು. ಪೂರ್ಣಾವಧಿ ಪತ್ರಕರ್ತರಾಗಿ ಕನಿಷ್ಠ ಎರಡು ವರ್ಷ ಸೇವಾನುಭವ ಹೊಂದಿರಬೇಕು. ಪೂರ್ಣಾವಧಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ನೇಮಕಾತಿ ಆದೇಶ, ವೇತನ ರಶೀತಿ, ಬ್ಯಾಂಕ್ ಸ್ಟೇಟ್‍ಮೆಂಟ್ ಒದಗಿಸಬೇಕು. ಬಸ್‍ಪಾಸ್ ಸೌಲಭ್ಯ ಪಡೆಯುವ ಅವಧಿ 2 ವರ್ಷ ಅಥವಾ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವವರೆಗೆ ಯಾವದು ಕಡಿಮೆಯೋ ಅದನ್ನು ಪರಿಗಣಿಸಲಾಗುವದು. ಪ್ರಾದೇಶಿಕ ಪತ್ರಿಕೆಗಳ ವರದಿಗಾರರಿಗೆ, ಪತ್ರಿಕೆಯ ಪುಟಗಳ ಸಂಖ್ಯೆ ಆಧರಿಸಿ, ಬಸ್‍ಪಾಸ್ ನೀಡಲಾಗುವದು.
ಜಿಲ್ಲಾಮಟ್ಟದ ಪತ್ರಿಕೆಗಳ ವರದಿಗಾರರಿಗೆ ಪತ್ರಿಕೆಯ ಪುಟಗಳ ಸಂಖ್ಯೆ ಆಧರಿಸಿ ಬಸ್ ಪಾಸ್ ನೀಡಲಾಗುವದು. 2 ಪುಟ-ಪತ್ರಿಕೆಯ ಸಂಪಾದಕರು (ಮಾಧ್ಯಮ ಮಾನ್ಯತಾ ಪತ್ರ ಪಡೆದಿರದಿದ್ದರೆ) ಅಥವಾ ಸಂಪಾದಕರು ಶಿಫಾರಸ್ಸು ಮಾಡುವ ಒಬ್ಬ ವರದಿಗಾರರು, 4 ಅಥವಾ ಹೆಚ್ಚು ಪುಟಗಳು ಪತ್ರಿಕೆಯ ಸಂಪಾದಕರು ಶಿಫಾರಸ್ಸು ಮಾಡುವ ತಲಾ ಒಬ್ಬ ವರದಿಗಾರ ಹಾಗೂ ಛಾಯಾಗ್ರಾಹಕ.
ಒಂದು ವೇಳೆ ಪತ್ರಿಕೆಗಳಲ್ಲಿ ಛಾಯಾಗ್ರಾಹಕರು ಕಾರ್ಯ ನಿರ್ವಹಿಸುತ್ತಿಲ್ಲವಾದರೆ ಸಂಪಾದಕರು ಶಿಫಾರಸ್ಸು ಮಾಡಿದ ವರದಿಗಾರರಿಗೆ ಬಸ್‍ಪಾಸ್ ನೀಡಬಹುದು. ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ನಿಯತಕಾಲಿಕೆಗಳು ಅಂದರೆ ವಾರಪತ್ರಿಕೆ, ಪಾಕ್ಷಿಕ ಹಾಗೂ ಮಾಸ ಪತ್ರಿಕೆಗಳ ಸಂಪಾದಕರೊಬ್ಬರಿಗೆ ಮಾತ್ರ ಬಸ್‍ಪಾಸ್ ನೀಡಲಾಗುವದು. ವಿಶೇಷ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಬಸ್‍ಪಾಸ್ ನೀಡಲು ಅವಕಾಶವಿಲ್ಲ.
ವಿದ್ಯುನ್ಮಾನ ಮಾಧ್ಯಮ: ತಾಲೂಕು ಕೇಂದ್ರಗಳಲ್ಲಿ ರಾಜ್ಯದ ಉಪಗ್ರಹ ವಾಹಿನಿಗಳ ಪೂರ್ಣಾವಧಿ ವರದಿಗಾರರು, ಕ್ಯಾಮರಾಮನ್ ಸೇವೆ ಸಲ್ಲಿಸುತ್ತಿದ್ದರೆ, ಒಬ್ಬ ವರದಿಗಾರ ಮತ್ತು ಒಬ್ಬ ಕ್ಯಾಮರಾಮನ್‍ಗೆ ಬಸ್‍ಪಾಸ್ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ವಾರ್ತಾ ಇಲಾಖೆ ಕಚೇರಿ ಸಂಪರ್ಕಿಸಬಹುದಾಗಿದೆ.