*ಗೋಣಿಕೊಪ್ಪಲು, ಡಿ. 7: ಭತ್ತ ಖರೀದಿಗೆ ಮುಂದಾಗದಿದ್ದಲ್ಲಿ ಪ್ರತಿಭಟನೆ ಕೈಗೊಳ್ಳಲಾಗುವದು ಎಂದು ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಅರುಣ್ ಭೀಮಯ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷ ಕಂಜಿತಂಡ ಮಂದಣ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರಕಾರ 2017-18 ನೇ ಸಾಲಿನಲ್ಲಿ ಖಾರೀಫ್ ಬೆಳೆ ಸೇರಿದಂತೆ ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು 13 ನೇ ಜೂನ್ 2017 ರಂದು ಘೋಷಿಸಿದೆ. ಸಾಮಾನ್ಯ ಭತ್ತಕ್ಕೆ ರೂ. 1550 ಮತ್ತು ಗ್ರೇಡ್ ಎ ಗೆ ರೂ. 2590 ಆಗಿರುತ್ತದೆ. ಆದರೆ ರಾಜ್ಯ ಸರಕಾರ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ. ತನ್ನ ಪಾಲಿನ ಸಹಾಯ ಧನದ ಬಿಡುಗಡೆಯಾಗಲಿ ಅಥವಾ ಘೋಷಣೆಯಾಗಲಿ ಮಾಡಿಲ್ಲ. ಅಲ್ಲದೆ ಭತ್ತ ಖರೀದಿ ಕೇಂದ್ರವನ್ನು ತೆರೆದಿಲ್ಲ. ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ವ್ಯಾಪಾರಿಗಳು ರೈತರ ಭತ್ತವನ್ನು ರೂ. 1200 ರಿಂದ 1250 ರವರೆಗೆ ಖರೀದಿಸುತ್ತಿದ್ದಾರೆ.
ರಾಜ್ಯ ಸರಕಾರ ತಕ್ಷಣವೇ ಕೇಂದ್ರ ಸರಕಾರದ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ ಸಹಾಯ ಧನ ಬಿಡುಗಡೆ ಮಾಡಬೇಕು ಮತ್ತು ಭತ್ತ ಖರೀದಿ ಕೇಂದ್ರ ತೆರೆದು ಭತ್ತ ಖರೀದಿಗೆ ವ್ಯವಸ್ಥೆ ಮಾಡಬೇಕು. ಒಂದು ವಾರದೊಳಗೆ ಭತ್ತ ಖರೀದಿಗೆ ವ್ಯವಸ್ಥೆ ಮಾಡದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲಾಗುವದು ಎಂದು ತಿಳಿಸಿದ್ದಾರೆ.