ಮಡಿಕೇರಿ, ಡಿ. 7: ಮಡಿಕೇರಿ ತಾಲೂಕು ಬಿಜೆಪಿ ವತಿಯಿಂದ ಕೊಡಗಿನ ರಸ್ತೆಗಳ ಅವ್ಯವಸ್ಥೆ ಖಂಡಿಸಿ, ತಾ. 12ರಂದು ಭಾಗಮಂಡಲದಿಂದ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ತನಕ ಜಾಥಾ ಹಮ್ಮಿಕೊಂಡಿರುವದಾಗಿ ತಾಲೂಕು ಬಿಜೆಪಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರವಿಕಾಳಪ್ಪ, ಸುಬ್ರಮಣ್ಯ ಉಪಾಧ್ಯಾಯ, ಕೋಡಿ ಪ್ರಸನ್ನ ಹಾಗೂ ಮಹೇಶ್ ಜೈನಿ ಈ ಬಗ್ಗೆ ವಿವರ ನೀಡಿದರು. ಕರಿಕೆ, ಭಾಗಮಂಡಲ, ಮಡಿಕೇರಿ ಸೇರಿದಂತೆ ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ, ರಾಜ್ಯ ಸರಕಾರದ ವೈಫಲ್ಯ ಖಂಡಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ತಾ. 12ರಂದು ಬೆಳಿಗ್ಗೆ 7 ಗಂಟೆಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಬಿಜೆಪಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಸೇರಿದಂತೆ, ಜಿ.ಪಂ. ಸಹಿತ ಎಲ್ಲಾ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪೂಜೆ ಸಲ್ಲಿಸಿ ಜಾಥಾ ಆರಂಭಿಸಲಾಗುವದು ಎಂದು ತಿಳಿಸಿದರು.

ಜಿಲ್ಲೆಯ ಪ್ರಮುಖ ಯಾತ್ರಾಸ್ಥಳ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ತೆರಳುವ ಮುಖ್ಯರಸ್ತೆ ಸಹಿತ ಕೊಡಗಿನ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಬಗ್ಗೆ ಸರಕಾರ ಇದುವರೆಗೆ ಸ್ಪಂದಿಸಿಲ್ಲವೆಂದು ಆರೋಪಿಸಿದರು. ಅಲ್ಲದೆ ಕಾಂಗ್ರೆಸ್ ಸರಕಾರದ ವೈಫಲ್ಯ ಖಂಡಿಸಿ ಈ ಬೃಹತ್ ಮಟ್ಟದ ಜಾಥಾದೊಂದಿಗೆ ತಾ. 12ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವದು ಎಂದು ಮಾಹಿತಿ ನೀಡಿದರು.