ಮಡಿಕೇರಿ, ಡಿ. 7: ಕರ್ತವ್ಯದಲ್ಲಿ ಧೈರ್ಯ, ಪ್ರಾಮಾಣಿಕತೆ ಮತ್ತು ಸಮಯ ಪ್ರಜ್ಞೆಯನ್ನು ಮೆರೆದ ಜಿಲ್ಲೆಯ ಪೊಲೀಸ್ ಸಿಬ್ಬಂದಿಯನ್ನು ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ಘಟಕದಿಂದ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರಕ್ಕೆ ಶಿಫಾರಸು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದತ್ತ ಜಯಂತಿ ಸಂದರ್ಭ ಬಂದೋಬಸ್ತ್ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಸಂದರ್ಭ ದತ್ತ ಮಾಲಾಧಾರಿಗಳ ಗುಂಪು ಅಲ್ಲಿದ್ದ ಗೋರಿಗಳಿಗೆ ಹಾನಿ ಮಾಡಲು ಪ್ರಯತ್ನಿಸಿದ್ದು, ಅಲ್ಲಿ ಕರ್ತವ್ಯದಲ್ಲಿದ್ದ ಶ್ರೀಮಂಗಲ ಪೊಲೀಸ್ ಠಾಣೆಯ ಸಿಬ್ಬಂದಿ ಗುರುದೇವ್ ಪಾವಡೆ ದಯಾಗೊಂಡ ಹಾಗೂ ಬೆಳಗಾವಿ ಜಿಲ್ಲೆಯ ಸದಲಗ ಪೊಲೀಸ್ ಠಾಣೆಯ ಎಸ್.ಪಿ. ಗಲಗಲಿ ಅವರುಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಗುಂಪನ್ನು ತಡೆದು ಇನ್ನಷ್ಟು ಹಾನಿಯಾಗದಂತೆ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಘಟಕದಿಂದ ತಲಾ ರೂ. 10,000 ನಗದು ಪುರಸ್ಕಾರ ಮಂಜೂರು ಮಾಡಿದ್ದು, ರಾಜ್ಯ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾ ನಿರೀಕ್ಷಕರಿಂದ ಡಿಜಿ ಕಮಾಂಡೇಷನ್ ಪತ್ರಕ್ಕೂ ಶಿಫಾರಸು ಮಾಡಲಾಗಿದೆ.