ಸೋಮವಾರಪೇಟೆ, ಡಿ. 7: ವಿವಿಧ ಆಶ್ರಯ ಯೋಜನೆಯಡಿ ಬಡವರಿಗೆ ಮನೆ ಮಂಜೂರಾತಿಗೆ ಹಣದ ಬೆಡಿಕೆಯಿಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವದು. ಫಲಾನುಭವಿಗಳು ಸರ್ಕಾರದ ಸೌಲಭ್ಯಕ್ಕಾಗಿ ಲಂಚ ನೀಡಬೇಕಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ವಿವಿಧ ಆಶ್ರಯ ಯೋಜನೆಯಡಿ ಅಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಯೋಜನೆಯನ್ನು ಅನುಷ್ಠಾನ ಗೊಳಿಸುವ ಅಧಿಕಾರಿಗಳು ಬಡ ಫಲಾನುಭವಿಗಳಿಂದ ಲಂಚದ ಬೇಡಿಕೆ ಇಡುತ್ತಿರುವದು ಗಮನಕ್ಕೆ ಬಂದಿದೆ. ನಿರ್ಗತಿಕರಿಗೆ ಸರ್ಕಾರದ ಮನೆ ನೀಡುವ ಯೋಜನೆ ಲೂಟಿ ಮಾಡುವ ಯೋಜನೆಯಾಗಬಾರದು. ಇದು ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ರಂಜನ್ ಎಚ್ಚರಿಕೆ ನೀಡಿದರು.
ಮನೆ ಇಲ್ಲದವರಿಗೆ ಮಾತ್ರ ಮನೆ ಮಂಜೂರು ಮಾಡಬೇಕು. ಉಳ್ಳವರಿಗೆ ಮಂಜೂರಾತಿ ಮಾಡಿದರೆ ಸ್ಥಳ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಯನ್ನು ಮನೆಗೆ ಕಳುಹಿಸ ಲಾಗುವದು. ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳ ಶಿಫಾರಸ್ಸಿಗೆ ಒಳಗಾಗಿ ಕಾನೂನು ಉಲ್ಲಂಘನೆ ಮಾಡಿ ಸ್ಥಿತಿವಂತರಿಗಾಗಿ ಯೋಜನೆ ದುರುಪಯೋಗವಾದರೆ ಪಿಡಿಓಗಳೇ ನೇರ ಹೊಣೆ ಎಂದು ಶಾಸಕರು ಎಚ್ಚರಿಸಿದರು.
ಬಸವ ವಸತಿ ಯೋಜನೆಯಡಿ ಗರ್ವಾಲೆ ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸ ಲಾಯಿತು. ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ, ಕಾರ್ಯನಿರ್ವ ಹಣಾಧಿಕಾರಿ ಚಂದ್ರಶೇಖರ್, ತಹ ಶೀಲ್ದಾರ್ ಮಹೇಶ್, ಯೋಜನೆಯ ಅನುಷ್ಠಾನ ಅಧಿಕಾರಿ ಪ್ರದೀಪ್ ಅವರುಗಳು ಉಪಸ್ಥಿತರಿದ್ದರು.