ಕುಶಾಲನಗರ, ಡಿ. 7: ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಕಲ್ಲುಗಣಿಕಾರಿಕೆಯ ಶಬ್ಧ ಮರುಕಳಿಸತೊಡಗಿದೆ. ಹಗಲು, ರಾತ್ರಿ ಎನ್ನದೆ ಮೀಸಲು ಅರಣ್ಯದ ನಡುವೆ ಭೂಮಿಯ ಒಡಲನ್ನು ಸ್ಫೋಟಿಸಿ ಸುತ್ತಮುತ್ತಲ ಪರಿಸರ ಹಾನಿಯೊಂದಿಗೆ ಕಾಡು ಪ್ರಾಣಿಗಳು ನಾಡಿಗೆ ನಿರಂತರವಾಗಿ ಲಗ್ಗೆ ಹಾಕುವ ದುಸ್ಥಿತಿ ಎದುರಾದರೂ ಸಂಬಂಧಿ ಸಿದ ಇಲಾಖೆಗಳ ಅಧಿಕಾರಿಗಳು ಮೌನ ವಹಿಸಿರುವದು ಸಂಶಯಕ್ಕೆ ಎಡೆಮಾಡಿದೆ.

ಕುಶಾಲನಗರ ಸಮೀಪದ ತೊರೆನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಾಣಾವಾರ ಬಳಿಯ ಮೀಸಲು ಅರಣ್ಯ ಬಳಿ ಕೇರಳ ಮೂಲದ ಕೆಲವು ವ್ಯಕ್ತಿಗಳು ನಿರಂತರವಾಗಿ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು ಭಾರೀ ಸ್ಫೋಟಕ ಬಳಸಿ ಕಲ್ಲುಗಳನ್ನು ಸಿಡಿಸುತ್ತಿರುವ ಬಗ್ಗೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಿದ್ದಲಿಂಗಪುರ ಗ್ರಾಮದ ಸರ್ವೆ ನಂ 1/1 ರಲ್ಲಿ ಈ ಕಲ್ಲುಕೋರೆ ಕಂಡುಬಂದಿದ್ದು ಕಳೆದ ಹಲವು ವರ್ಷಗಳಿಂದ ಭೂಮಿಯ ಒಡಲು ಬರಿದಾಗುತ್ತಿರುವದು ಇಲ್ಲಿ ಗೋಚರಿಸಿದೆ.

ಸುತ್ತಮುತ್ತಲ ಮರ, ಗಿಡಗಳು ನೆಲಕಚ್ಚುವದರೊಂದಿಗೆ ಪರಿಸರ ಸಂಪೂರ್ಣ ನಾಶಗೊಳ್ಳುತ್ತಿದೆ. ವನ್ಯ ಜೀವಿಗಳು ಕಾಡಿನಿಂದ ನಾಡಿಗೆ ಲಗ್ಗೆಯಿಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ವಿಷಯದ ಸತ್ಯಾಸತ್ಯತೆ ಅರಿವಿದ್ದರೂ ಮೌನ ವಹಿಸುತ್ತಿರುವ ಗ್ರಾಮಸ್ಥರು, ಕೆಳಹಂತದ ಸಿಬ್ಬಂದಿಗಳ ಅಸಹಾಯಕತೆ ಈ ನಡುವೆ ಅಧಿಕಾರಿಗಳು ಮತ್ತು ಧನಶಾಹಿಗಳ ನಡುವೆ ಅಘೋಷಿತ ಒಪ್ಪಂದ ಇವೆಲ್ಲವೂ ಈ ಚಟುವಟಿಕೆಗಳು ಸರಾಗವಾಗಿ ನಡೆಯಲು ಪ್ರಮುಖ ಕಾರಣವಾಗಿದೆ.

ಇತ್ತೀಚೆಗಷ್ಟೆ ಕಲ್ಲುಕೋರೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಿಟಾಚಿ ಯಂತ್ರ ಬಳಸಿ ಸುಮಾರು ಶ್ರೀಗಂಧದ ಮರಗಳನ್ನು ಹಾಗೂ ಇತರ ಜಾತಿಯ ಮರಗಳನ್ನು ನಾಶಗೊಳಿಸಿದ ಹಿನೆÀ್ನಲೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳು ನಾಮ ಕಾವಸ್ಥೆಗೆ ಮೊಕದ್ದಮೆಯೊಂದನ್ನು ದಾಖಲಿಸಿರುವದು ಬೆಳಕಿಗೆ ಬಂದಿದೆ. ಎರಡು ಬೃಹತ್ ಹಿಟಾಚಿಗಳು ಇಲ್ಲಿ ಅರಣ್ಯ ನಾಶದಲ್ಲಿ ತೊಡಗಿದ್ದು ಅದರಲ್ಲಿ ಒಂದು ಹಿಟಾಚಿಯನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದ್ದು ಓರ್ವ ಚಾಲಕ ಮತ್ತು ಹೊರ ರಾಜ್ಯದ ಕಾರ್ಮಿಕನೊಬ್ಬನನ್ನು ಬಂಧಿಸಿರುವದು ತಿಳಿದುಬಂದಿದೆ. ಆದರೆ ಕಲ್ಲುಕೋರೆ ನಡೆಸುತ್ತಿರುವ ಕೇರಳದ ವ್ಯಕ್ತಿಗಳ ಮೇಲೆ ಯಾವದೇ ಕ್ರಮ ಕೈಗೊಳ್ಳದಿರುವದು ಇಲ್ಲಿ ಸಂಶಯಕ್ಕೆ ಎಡೆಮಾಡಿದೆ ಎನ್ನುವದು ಉದ್ಯಮಿ ಕಿಶೋರ್ ಕೆ. ವಾಸು ಆರೋಪ ಮಾಡಿದ್ದಾರೆ.

ಹಿಟಾಚಿ ಯಂತ್ರವನ್ನು ವಶಪಡಿಸಿ ಕೊಂಡಿದ್ದರೂ ಅದರ ನೋಂದಣಿ ಸಂಖ್ಯೆಯನ್ನು ದಾಖಲಿಸದಿರುವದು ಹಾಗೂ ಈ ಕಲ್ಲುಕೋರೆಯನ್ನು ಕಾರ್ಯಾಚರಣೆ ನಡೆಸುತ್ತಿರುವ ಕೇರಳದ ಇರಕೂರ್ ವ್ಯಾಪ್ತಿಯ ವ್ಯಕ್ತಿಗಳ ಬಗ್ಗೆ ಯಾವದೇ ಮೊಕದ್ದಮೆ ದಾಖಲಿಸದಿರುವದು ಸಂಶಯಕ್ಕೆ ಎಡೆಮಾಡಿದೆ ಎಂದಿದ್ದಾರೆ. ಕೇರಳದ ರಾಜಕೀಯ ಪಕ್ಷವೊಂದರ ಪ್ರಮುಖ ರಾಗಿರುವ ಇವರ ಪ್ರಭಾವಕ್ಕೆ ಮಣಿದಿ ರುವದಾಗಿ ಕಿಶೋರ್ ಶಕ್ತಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ ಗಳು ಹಾಗೂ ಅರಣ್ಯ ಅಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸರಕಾರಕ್ಕೆ ಲಕ್ಷಾಂತರ ರೂ.ಗಳ ರಾಜಧನ ಪಾವತಿಸುವಲ್ಲಿಯೂ ವಂಚನೆ ಮಾಡಿರುವ ಬಗ್ಗೆ ಕಿಶೋರ್ ದಾಖಲೆ ಸಹಿತ ಮಾಹಿತಿ ಒದಗಿಸಿದ್ದಾರೆ.

ಕಲ್ಲುಕೋರೆಯ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಮೀಸಲು ಅರಣ್ಯದ ಸರಹದ್ದು ಗುರುತಿಸುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ಕಂದಕವನ್ನು ಕೂಡ ಈ ಕಲ್ಲುಕೋರೆ ನಡೆಸುವ ವ್ಯಕ್ತಿಗಳು ಮಣ್ಣುತುಂಬಿ ಮುಚ್ಚಿದ್ದು ರಾಜಾರೋಷವಾಗಿ ಅಕ್ರಮ ರಸ್ತೆ ನಿರ್ಮಿಸಿರುವದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಗೋಚರಿಸಿದೆ.

ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಲವು ಮರಗಳು ಹನನವಾಗುತ್ತಿದ್ದು ಕಲ್ಲು ಗಣಿಯಲ್ಲಿ ಭಾರೀ ಸ್ಫೋಟಕ ಬಳಸುವ ಹಿನ್ನೆಲೆಯಲ್ಲಿ ಇಡೀ ಗ್ರಾಮವ್ಯಾಪ್ತಿಗಳಲ್ಲಿ ಶಬ್ಧ ಮಾಲಿನ್ಯದೊಂದಿಗೆ ಕೆಲವೊಮ್ಮೆ ಭೂಕಂಪನದ ಅನುಭವವೂ ಆಗುತ್ತದೆ ಎನ್ನುವದು ಸ್ಥಳೀಯ ನಿವಾಸಿ ನಂಜಪ್ಪ ಎನ್ನುವವರ ದೂರಾಗಿದೆ.

ಜನತೆ ಭಯದಿಂದ ದೂರು ನೀಡಲು ಹಿಂಜರಿಯುವಂತಾಗಿದೆ. ಈ ವ್ಯಾಪ್ತಿ ಕಾಡಾನೆ ದಾಟುವ ಕೇಂದ್ರವಾಗಿದ್ದು ಅವುಗಳು ರೈತರ ಹೊಲಗಳಲ್ಲಿ ಹಾನಿ ಮಾಡುತ್ತಿರುವ ಪರಿಸ್ಥಿತಿ ಉದ್ಭವವಾಗಿದೆ. ಇಡೀ ಪ್ರದೇಶ ಧೂಳುಮಯವಾಗುವದ ರೊಂದಿಗೆ ನಿಯಮ ಬಾಹಿರವಾಗಿ ಜಲ್ಲಿ ಹಾಗೂ ಎಂ-ಸ್ಯಾಂಡ್ ಸರಬರಾಜು ಸಂದರ್ಭ ರಸ್ತೆಯಲ್ಲಿ ತೆರಳುವ ವಾಹನ ಸವಾರರಿಗೂ ಭಾರೀ ಅನಾನುಕೂಲದೊಂದಿಗೆ ಅಪಘಾತಗಳು ಉಂಟಾಗುವ ಸಂಭವ ಸೃಷ್ಟಿಯಾಗಿದೆ. ಇದಕ್ಕೆ ಶಾಶ್ವತ ಕಡಿವಾಣ ಹಾಕಬೇಕಾಗಿದೆ ಎಂದು ನಂಜಪ್ಪ ದೂರಿದ್ದಾರೆ.

ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದು ಕಂಡು ಬಂದಿದೆ.

ಈ ಆವರಣಕ್ಕೆ ಪ್ರವೇಶ ನಿಷಿದ್ದ ಎಂಬ ಫಲಕಗಳನ್ನು ಸ್ಥಳದಲ್ಲಿ ಅಳವಡಿಸಿದ್ದು ಹೊರತಾಗಿ ಅಕ್ರಮಗಳ ನಿಯಂತ್ರಣಕ್ಕೆ ಯಾವದೇ ರೀತಿಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವದು ಈ ಭಾಗದ ಜನತೆಯ ಅಳಲಾಗಿದೆ.

ನಿಯಮಾನುಸಾರ ಯಾವದೇ ಗಣಿಗಾರಿಕೆ ಸಂದರ್ಭ ಇಂತಿಷ್ಟು ಆಳದ ತನಕ ಮಾತ್ರ ಕಲ್ಲು ಗಣಿಗಾರಿಕೆ ಮಾಡಬಹುದೇ ಹೊರತು ಭಾರೀ ಕಂದಕ ತೋಡುವ ಮೂಲಕ ಭೂಮಿಯ ಗರ್ಭವನ್ನು ಸ್ಫೋಟಿಸು ತ್ತಿರುವ ಬಗ್ಗೆ ಯಾವದೇ ಅಧಿಕಾರಿಗಳು ತಲೆಕೆಡಿಸಿ ಕೊಳ್ಳದಿರುವದು ಇಲ್ಲಿ ಕಾಣಬಹುದು.

ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಯ ಒತ್ತಿನಲ್ಲಿ ಹಾಗೂ ಅರಣ್ಯ ಇಲಾಖೆಯ ವಸತಿಗೃಹದ ಕೂಗಳತೆ ದೂರದಲ್ಲಿ ಇಷ್ಟೆಲ್ಲಾ ಅನಾಹುತ ನಡೆಯುತ್ತಿದ್ದರೂ ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.

- ಚಂದ್ರಮೋಹನ್