ಕುಶಾಲನಗರ, ಡಿ. 4 : ಹುಣಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಹನುಮ ಜಯಂತಿಗೆ ಅಡ್ಡಿಪಡಿಸಿದ ಘಟನೆ ಯನ್ನು ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಯುವಮೋರ್ಚಾ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಗಣಪತಿ ದೇವಾಲಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಿಂದುಗಳ ಭಾವನೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ಧಿಕ್ಕಾರ ಕೂಗಲಾಯಿತು.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಹಿಂದುಗಳ ಆಚರಣೆಗಳನ್ನು ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದುಗಳ ಆಚರಣೆಗಳಿಗೆ ನಿಷೇಧ ವಿಧಿಸುವದರೊಂದಿಗೆ ಮುಖಂಡರಿಗೆ ನಿರ್ಭಂಧ ಹೇರುವ ಮೂಲಕ ಮುಖ್ಯಮಂತ್ರಿ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಏಕಪಕ್ಷೀಯ ವರ್ತನೆಯಿಂದ ಬೇಸತ್ತಿರುವ ರಾಜ್ಯ ಜನತೆ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಸದಸ್ಯ ಎಂ.ಎಂ.ಚರಣ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ತಾಲೂಕು ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಯುವಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ನಿಡ್ಯಮಲೆ ದಿನೇಶ್, ಶಿವಾಜಿರಾವ್, ಎಂ.ವಿ.ನಾರಾಯಣ್, ನವನೀತ್ ಮತ್ತಿತರರು ಇದ್ದರು.
ಸಿದ್ದಾಪುರ : ಹನುಮ ಜಯಂತಿ ಆಚರಣೆಗೆ ಆಗಮಿಸುತ್ತಿದ್ದ ಸಂಸದ ಪ್ರತಾಪ್ ಸಿಂಹರವರನ್ನು ಬಂಧಿಸಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯ ಬಿ.ಜೆ.ಪಿ. ಸ್ಥಾನೀಯ ಸಮಿತಿ ಖಂಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿ.ಜೆ.ಪಿ. ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಭಾನುವಾರದಂದು ಹುಣಸೂರಿನಲ್ಲಿ ಏರ್ಪಡಿಸಿದ್ದ ಹನುಮ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ಸಂಸದ ಪ್ರತಾಪ್ ಸಿಂಹ ಅವರನ್ನು ಹುಣಸೂರಿನ ಸಮೀಪದ ಬಿಳಿಕೆರೆ ಬಳಿ ತಡೆದು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಪೋಲಿಸರು ಬಂಧಿಸಿರುವದು ಖಂಡನೀಯವಾಗಿದೆ ಎಂದ ಅವರು ಕಳೆದ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಸಂಘ ಪರಿವಾರ ಹಾಗೂ ಬಿ.ಜೆ.ಪಿ. ಕಾರ್ಯಕರ್ತರ ವಿರುದ್ದ ದಬ್ಬಾಳಿಕೆ ಹಾಗೂ ಗೂಂಡಾ ಪ್ರವೃತ್ತಿಯನ್ನು ಮುಂದುವರಿಸುತ್ತಿದೆ ಎಂದು ಆರೋಪಿಸಿದರು.
ಹುಣಸೂರಿನಲ್ಲಿ ಹನುಮ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸದೆ ಏಕಾಏಕಿ ಸಂಸದರನ್ನು ಬಂಧಿಸಿರುವ ಕ್ರಮ ಸಮಂಜಸವಲ್ಲ ಎಂದರು. ತಾ.ಪಂ. ಸದಸ್ಯ ಜನೀಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಗದ ಜನರನ್ನು ಒಲ್ಯೆಸಲು ಪೊಲೀಸರನ್ನು ದುರ್ಬಲಕ್ಕೆ ಮಾಡುತ್ತಿದ್ದಾರೆಂದು ಆರೋಪಿಸಿದರು. ಗೋಷ್ಠಿಯಲ್ಲಿ ಬಿ.ಜೆ.ಪಿ, ಪಕ್ಷದ ಪದಾಧಿಕಾರಿಗಳಾದ ಎಂ.ಎ. ಆನಂದ, ಸತೀಶ್, ಮುರುಳಿ, ಶಿವದಾಸ್, ಸುನೀಲ್ ಇತರರು ಹಾಜರಿದ್ದರು.
ತುಘಲಕ್ ದರ್ಬಾರ್: ರಂಜನ್ ಆರೋಪ
ಸೋಮವಾರಪೇಟೆ: ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಬದಲಿಗೆ ತುಘಲಕ್ ದರ್ಬಾರ್‍ನಂತಹ ಆಡಳಿತ ವ್ಯವಸ್ಥೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮ ಜಯಂತಿ ಮೆರವಣಿಗೆಗೂ ಅಡ್ಡಿಪಡಿಸುವ ಮೂಲಕ ಅದನ್ನು ನಿರೂಪಿಸಿದ್ದಾರೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದರು.
ಹುಣಸೂರಿನಲ್ಲಿ ಆಯೋಜಿಸಲಾಗಿದ್ದ ಹನುಮ ಜಯಂತಿ ಕಾರ್ಯಕ್ರಮ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಾಮಾಜಿಕ ನೆಮ್ಮದಿ ಹಾಳಾಗಿದೆ. ಕಳೆದ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹನುಮ ಜಯಂತಿ ಮೆರವಣಿಗೆಗೆ ತಡೆಯೊಡ್ಡುವ ಮೂಲಕ ಹಿಂದೂಗಳ ಆಚರಣೆಯನ್ನು ಹಿಮ್ಮೆಟ್ಟಿಸುವ ಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಎಲ್ಲರಿಗೂ ಹಬ್ಬಾಚರಣೆ ಮಾಡುವ ಹಕ್ಕಿದ್ದು, ಅದನ್ನು ಕಸಿದುಕೊಳ್ಳುವ ಮೂಲಕ ಸಿದ್ದರಾಮಯ್ಯ ಅವರದು ತುಘಲಕ್ ದರ್ಬಾರ್ ಎಂಬದನ್ನು ನಿರೂಪಿಸಿದ್ದಾರೆ. ಇಂತಹ ಸರ್ಕಾರವನ್ನು ಜನತೆ ಕಿತ್ತೊಗೆಯಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಅಲ್ಪಸಂಖ್ಯಾತರ ಮೆರವಣಿಗೆಗೆ ಇಲ್ಲದ ಅಡೆತಡೆಗಳು ಹನುಮ ಜಯಂತಿಗೆ ಮಾತ್ರ ಯಾಕೆ? ಹಿಂದೂ ಸಮಾಜದ ಮೇಲಿನ ದೌರ್ಜನ್ಯ ಮಿತಿಮೀರುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದವರ ಬಂಧನಕ್ಕೆ ಮುಂದಾಗದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ, ಹನುಮ ಮಾಲಾಧಾರಿಗಳ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದರು.
ಹಿಂದೂ ಸಮಾಜದ ಧಮನಕ್ಕೆ ಹೊರಟಿರುವ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯಲ್ಲಿ ತಮ್ಮ ಶಾಸಕ ಸ್ಥಾನವನ್ನೂ ಕಳೆದು ಕೊಳ್ಳಲಿದ್ದಾರೆ ಎಂದು ಅಭಿಮನ್ಯುಕುಮಾರ್ ಹೇಳಿದರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.