ಸಿದ್ದಾಪುರ, ಡಿ. 5: ಸಂಘಟನೆಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್ ಕಿವಿಮಾತು ಹೇಳಿದರು.ನೆಲ್ಲಿಹುದಿಕೇರಿ ಡೋಮಿನೋಸ್ ಕ್ರೀಡಾ ಮತ್ತು ಕಲಾ ಯುವಜನ ಸಂಘ ಹಾಗೂ ನೆಹರು ಯುವ ಕೇಂದ್ರ ಮಡಿಕೇರಿ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ. ಸಭಾಂಗಣದಲ್ಲಿ ಹಮ್ಮಿ ಕೊಂಡ ಕೌಶಲ್ಯಾಭಿವೃದ್ಧಿ ಮತ್ತು ಬ್ಯೂಟಿಶೀಯನ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಡೋಮಿನೋಸ್ ಸಂಘವು ಪರಿಸರ ಕಾಳಜಿ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವದಲ್ಲದೆ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಿದ್ದು ಜಿಲ್ಲೆಗೆ ಮಾದರಿ ಸಂಘಟನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾಮದ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ತರಬೇತಿಯ ಲಾಭ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು.
ನೆಲ್ಲಿಹುದಿಕೇರಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುಂಡ ಸ್ವಾಮಿ ಮಾತನಾಡಿ, ಸಂಘ ಮಹಿಳೆಯರನ್ನು ಅರ್ಥಿಕವಾಗಿ ಮುಂದೆ ತರಲು ಕೌಶಲ್ಯ ತರಬೇತಿ ಕಾರ್ಯಕ್ರಮ ಮಾಡುತ್ತಿರುವದು ಸಮಾಜದ ಪ್ರಗತಿಗೆ ಉತ್ತಮವಾದ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಸಕ್ತರು 9986901250 ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯ, ತಾಲೂಕು ಪಂಚಾಯಿತಿ ಸದಸ್ಯೆ ಸುಹಾದ ಆಶ್ರಫ್, ನೆಹರು ಯುವ ಕೇಂದ್ರದ ರವೀಂದ್ರ, ಡೋಮಿನೋಸ್ ಸಂಘದ ಅಧ್ಯಕ್ಷ ಶೌಕತ್ ಅಲಿ, ಕಾರ್ಯದರ್ಶಿ ಶ್ರೇಯಸ್, ಸದಸ್ಯ ಗಗನ್ ಗಪ್ಪಣ್ಣ, ಜೋಸೆಫ್, ಶಿಹಾಬುದ್ದೀನ್, ನಿಶಾಬುದ್ದೀನ್, ಕಿರಣ್ ಹಬೀಬ್ ಮತ್ತು ಇತರರು ಇದ್ದರು.