ಕೂಡಿಗೆ, ಡಿ. 5: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ, ಮದಲಾಪುರ, ಕೂಡಿಗೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೂಡಿಗೆ ವಲಯ ಶ್ರೀ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ, ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘ, ಜೇನುಕಲ್ಲುಬೆಟ್ಟ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ಹಾಗೂ ಕೂಡಿಗೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಮದಲಾಪುರ, ಶಿರಹೊಳಲು ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ 50 ಹೆಚ್ಚು ದಂಪತಿಗಳು ಪಾಲ್ಗೊಂಡಿದ್ದರು. ಅರ್ಚಕರಾದ ಸುಧಿ ಹಾಗೂ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ಬೆಳಗ್ಗಿನಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಕೂಡುಮಂಗಳೂರು ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶನಿವಾರಸಂತೆ ವಿಘ್ನೇಶ್ವರ ಬಾಲಿಕ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಪಿ.ಜಯಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಪ್ರತಿಯೊಬ್ಬರಲ್ಲೂ ಧಾರ್ಮಿಕ ಮನೋಭಾವ ಬೆಳೆಯುತ್ತದೆ. ಎಲ್ಲರ ಒಗ್ಗೂಡಿಕೆಯಿಂದ ಸ್ನೇಹಮಯ ಜೀವನ ನಡೆಸಲು ಅನುಕೂಲ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವನಹಳ್ಳಿ ಲ್ಯಾಂಪ್ ಸೊಸೈಟಿಯ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅನೇಕ ಯೋಜನೆಗಳು ಜಾರಿಯಲ್ಲಿದ್ದು, ಅವುಗಳ ಸದ್ಬಳಕೆ ಯಿಂದ ಗ್ರಾಮದ ಪ್ರತಿಯೊಬ್ಬರು ಅಭಿವೃದ್ಧಿಯತ್ತ ಸಾಗಲು ಅನುಕೂಲ ವಾಗುತ್ತಿದೆ. ದೇವರ ಬಗ್ಗೆ ಜನರಲ್ಲಿ ಭಯಭಕ್ತಿ ಮೂಡಿ ಬಂದರೆ ತಾನು ಸಾಧನೆ ಮಾಡುವ ಕಾರ್ಯವು ಯಶಸ್ವಿಯಾಗುತ್ತದೆ ಎಂಬ ನಂಬಿಕೆಯು ಮೂಡುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ಎಂ.ಐ.ಎಸ್ ಯೋಜನಾಧಿಕಾರಿ ಪುಷ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಸ್ವ-ಸಹಾಯ ಗುಂಪು ರಚನೆ, ಕೃಷಿ ಹೈನುಗಾರಿಕೆಗೆ, ವಿವಿಧ ಗುಡಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಸಾವಿರಾರು ಸ್ವ-ಸಹಾಯ ಗುಂಪುಗಳು ಅವುಗಳ ಪ್ರಯೋಜನ ಪಡೆದು ಪ್ರಗತಿಯತ್ತ ಸಾಗುತ್ತಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜಿ.ಸಿ. ನಿಂಗಪ್ಪ ವಹಿಸಿದ್ದರು.
ವೇದಿಕೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಸಿ. ಪ್ರೇಮಲೀಲಾ, ಉಪಾಧ್ಯಕ್ಷ ಕೆ.ಟಿ. ಗಿರೀಶ್, ಮದಲಾಪುರ ಗ್ರಾಮಸ್ಥ ಹೆಚ್.ಡಿ. ಕುಮಾರ್ ಇದ್ದರು. ಪೂಜಾ ಕಾರ್ಯಕ್ರಮದಲ್ಲಿ ಮದಲಾಪುರ, ಕೂಡಿಗೆ, ಬ್ಯಾಡಗೊಟ್ಟ, ಹುದುಗೂರು, ಮಲ್ಲೇನಹಳ್ಳಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.