ಕೂಡಿಗೆ, ಡಿ. 5: ತೊರೆನೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ. ದೇವರಾಜು ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ತೊರೆನೂರಿನಲ್ಲಿ ಇರುವ ಪಶು ಚಿಕಿತ್ಸಾ ಕೇಂದ್ರದಲ್ಲಿ ಸಿಬ್ಬಂದಿಗಳಿಲ್ಲದೆ, ಗ್ರಾಮದ ಜಾನುವಾರುಗಳಿಗೆ ಯಾವುದೇ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಲು ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೊರಲಿನ ತೀರ್ಮಾನ ಕೈಗೊಂಡರು.

ಸಿದ್ಧಲಿಂಗಪುರದಲ್ಲಿ ಈಗಾಗಲೇ ತೆರೆದಿರುವ ಮದ್ಯದಂಗಡಿಯಲ್ಲಿ ಹಾಗೂ ಸುತ್ತಮುತ್ತಲು ಶುಚಿತ್ವ ಕಾಪಾಡಲು ತಿಳುವಳಿಕೆ ಪತ್ರ ನೀಡಬೇಕೆಂದು ಸದಸ್ಯರಾದ ಪಿ.ಡಿ. ರವಿಕುಮಾರ್, ಈಶ್ವರ್ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಬಿ. ದೇವರಾಜು ಮಾತನಾಡಿ, ಮಾತೃಪೂರ್ಣ ಯೋಜನೆಯನ್ನು ಗ್ರಾಮ ವ್ಯಾಪ್ತಿಯ ಗರ್ಭಿಣಿ ಮತ್ತು ಬಾಣಂತಿಯರು ಸದುಪಯೋಗಪಡಿಸಿಕೊಳ್ಳದ್ದರಿಂದ ಈ ಹಿಂದೆ ನೀಡುತ್ತಿದ್ದ ಮಾದರಿಯಲ್ಲಿಯೇ ಗರ್ಭಿಣಿ ಮತ್ತು ಬಾಣಂತಿಯರಿಗೆ ಆಹಾರ ಪದಾರ್ಥಗಳನ್ನು ಮನೆಗೆ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2016-17ನೇ ಹಣಕಾಸಿನ ಯೋಜನೆಯ ಕಾಮಗಾರಿಗಳನ್ನು ಆಯಾ ವಾರ್ಡಿನ ಸದಸ್ಯರ ಆಧ್ಯತೆಯ ಮೇರೆಗೆ ಕ್ರಮಕೈಗೊಳ್ಳುವದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ, ಗ್ರಾಮದ ಪ್ರಗತಿಗೆ ಮಾಸಿಕ ಸಭೆಯಲ್ಲಿ ಕೈಗೊಂಡಂತಹ ಕ್ರಿಯಾ ಯೋಜನೆಗಳನ್ನು ಪೂರ್ಣಗೊಳಿಸಲು ಆಯಾ ಗ್ರಾಮಗಳ ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಕಾಮಗಾರಿಗಳನ್ನು ನಡೆಸಲು ಸಹಕಾರಿಗಳಾಗಬೇಕು ಎಂದು ತಿಳಿಸಿದರು. ಸರ್ಕಾರದ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ಟಿ.ಡಿ. ಈಶ್ವರ, ರೂಪ, ಮಹೇಶ್, ಮಂಗಳ, ರೂಪ ಹರೀಶ್, ಕಿಶೋರ್ ಕುಮಾರ್, ರವಿಕುಮಾರ್, ತಾರಾ ಉದಯ್ ಇದ್ದರು.