ಕೂಡಿಗೆ, ಡಿ. 4: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳು ನಡೆದವು.

ಶಿಕ್ಷಕರಿಗೆ ಆಶುಭಾಷಣ, ಪ್ರಬಂಧ, ಗೀತಗಾಯನ, ಸ್ಥಳದಲ್ಲಿಯೇ ಪಾಠೋಪಕರಣಗಳ ರಚನೆ ಸ್ಪರ್ಧೆಗಳನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಮಾತನಾಡಿ, ಕರ್ನಾಟಕ ರಾಜ್ಯ ಶಿಕ್ಷಕರ ಕೇಂದ್ರಾಭಿವೃದ್ಧಿ ಸಂಘ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿಯನ್ನು ಹೊಂದಿದೆ. ಶಿಕ್ಷಕರಲ್ಲಿರುವ ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜವರಪ್ಪ, ಶ್ರೀನಿವಾಸ್, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಗೋವಿಂದ್‍ಶೆಟ್ಟಿ, ಪುಟ್ಟಸ್ವಾಮಿ, ಬಸವರಾಜ್, ಸೌಭಾಗ್ಯ, ದಯಾನಂದ್, ಪ್ರಕಾಶ್, ಶಿಕ್ಷಣ ಸಂಯೋಜಕ ಮೂರ್ತಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರುಕ್ಮಣಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಹಾಗೂ ಹಿರಿಯ ದೈಹಿಕ ಶಿಕ್ಷಕ ಗಣೇಶ್, ಶಿಕ್ಷಕರು ಪಾಲ್ಗೊಂಡಿದ್ದರು.