ನಾಪೆÇೀಕ್ಲು. ಡಿ. 4: ಸುಂದರ ಪರಿಸರದ ಪ್ರವಾಸಿ ತಾಣ ನಾಲ್ಕುನಾಡು ಅರಮನೆ, ಇತ್ತೀಚಿನ ವರ್ಷಗಳಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಇದಕ್ಕೆ ಸಾಕ್ಷಿ ಇಲ್ಲಿಗೆ ಪ್ರತಿನಿತ್ಯ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವದು. ಅರಮನೆಯ ಭವ್ಯ ಕಲ್ಪನೆಯೊಂದಿಗೆ ಬರುವ ಪ್ರವಾಸಿಗರಿಗೆ ಮೊದಲಿಗೆ ಸ್ಪಲ್ಪ ಕಸಿವಿಸಿಯಾಗುವದನ್ನು ಬಿಟ್ಟರೆ, ಅರಮನೆಯ ವಾಸ್ತು ಶಿಲ್ಪ, ಸುಂದರ ಕಲಾಕೃತಿ, ಸುತ್ತಲಿನ ಪರಿಸರ ಕಂಡೊಡನೆ ಪ್ರವಾಸಿಗರು ಹಸನ್ಮುಖಿಯಾಗುತ್ತಾರೆ.

ಕೊಡಗಿನ ಇತಿಹಾಸವನ್ನು ಕೆದಕಿದರೆ ಪುರಾತನ ದೇವಳಗಳು, ಗುಡಿ-ಗೋಪುರಗಳು, ಅರಮನೆಗಳು ಹೀಗೆ ದೊಡ್ಡ ಪಟ್ಟಿಯೇ ನಮ್ಮ ಕಣ್ಣ ಮುಂದೆ ಸುಳಿಯುತ್ತದೆ. ಇಂತಹ ಪುರಾತನ ಕಟ್ಟಡಗಳ ಸಾಲಿನಲ್ಲಿ ನಾಲ್ಕುನಾಡು ಅರಮನೆ ಪ್ರಮುಖವಾದುದು.

ಅರಮನೆ ಎಂದೊಡನೆ ನಮ್ಮೆದುರಿಗೆ ಬರುವದು ರಾಜ ವೈಭೋಗದ ಬೃಹದಾಕಾರದ ಅರಮನೆಯ ಚಿತ್ರ. ಆದರೆ ಇಲ್ಲಿನ ಚಿತ್ರಣವೇ ವಿಭಿನ್ನ. ಈ ಅರಮನೆಯ ನಿರ್ಮಾಣದ ಬಗ್ಗೆ ಹಲವರು ಹಲವು ರೀತಿಯಲ್ಲಿ ಹೇಳುವದುಂಟು. ಕೊಡಗಿನ ಚಿಕ್ಕವೀರರಾಜನು ಬೇಸಿಗೆ ಶಿಬಿರವಾಗಿ ಇದನ್ನು ಕಟ್ಟಿಸಿದನು. ಮೈಸೂರಿನ ರಾಜ ಟಿಪ್ಪು ಸುಲ್ತಾನನಿಂದ ಹಾಗೂ ಬ್ರಿಟೀಷರಿಂದ ರಕ್ಷಿಸಿಕೊಳ್ಳಲು ಈ ದಟ್ಟಾರಣ್ಯದಲ್ಲಿ ಅರಮನೆಯನ್ನು ನಿರ್ಮಿಸಿದನು ಎಂದು ಹೇಳುವವರೂ ಇದ್ದಾರೆ.

ರಾಜನು ಯಾವ ಕಾರಣದಿಂದ ಇಲ್ಲಿ ಅರಮನೆ ಕಟ್ಟಿಸಿದ್ದರೂ ಈಗ ಇದು ಪ್ರವಾಸಿಗರ, ಬೆಟ್ಟ ಚಾರಣಿಗರ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಂಡಿರುವದು ಮಾತ್ರ ಸತ್ಯ. ನಾಲ್ಕುನಾಡು ಅರಮನೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ 33 ಕಿ.ಮೀ. ಮತ್ತು ಕಕ್ಕಬೆಯಿಂದ 3 ಕಿ.ಮೀ ಅಂತರದಲ್ಲಿದೆ. ಈ ಅರಮನೆಯನ್ನು 1789-91ರ ಕಾಲಘಟ್ಟದಲ್ಲಿ ನಿರ್ಮಿಸಿರುವ ಬಗ್ಗೆ ದಾಖಲೆಗಳಿವೆ. ಈಗ ಅರಮನೆಯಿರುವ ಸ್ಥಳ ಹಿಂದೆ ಪುಲಿಯಂಡ ಕುಟುಂಬಸ್ಥರಿಗೆ ಸೇರಿದಾಗಿತ್ತು.

ಇಲ್ಲಿನ ಸುಂದರ ಪರಿಸರಕ್ಕೆ ಮಾರು ಹೋದ ರಾಜ ಅವರಿಗೆ ಬದಲಿ ಜಾಗ ನೀಡಿ ಇಲ್ಲಿ ಅರಮನೆ ನಿರ್ಮಿಸಿದನು ಎಂಬದು ಇತಿಹಾಸ. ಇದು ತಡಿಯಂಡಮೋಳ್ ಬೆಟ್ಟ ತಪ್ಪಲಿನಲ್ಲಿದ್ದು ದೊಡ್ಡ ದೊಡ್ಡ ಮರದ ತೊಲೆಗಳಿಂದ ಮಂಗಳೂರು ಹೆಂಚಿನ ಸಹಾಯದಿಂದ ನಿರ್ಮಿಸಲಾದ ಎರಡಂತಸ್ತಿನ ದೊಡ್ಡ ಕಟ್ಟಡ. ಇದರಲ್ಲಿ ಸುಂದರ ವಾಸ್ತು ಶಿಲ್ಪ ಮತ್ತು ಕೆತ್ತನೆಗಳನ್ನು ಯಥೇಚ್ಚವಾಗಿ ಕಾಣಬಹುದು. ಎದುರಿಗೆ ದೊಡ್ಡದಾದ ಹೆಬ್ಬಾಗಿಲು, ಒಳಗೆ ವಿಶಾಲವಾದ ಪ್ರಾಂಗಣ, ಅರಮನೆಯ ಎಡ ಪಾಶ್ರ್ವದಲ್ಲಿ ಸುಂದರವಾಗಿ ನಿರ್ಮಿಸಿದ ಮಂಟಪ ಪ್ರವಾಸಿಗರನ್ನು ಸೆಳೆಯುತ್ತದೆ. ಅರಮನೆಯ ಎದುರು ಭಾಗದಲ್ಲಿ ಗಾರೆ ಕಲ್ಲಿನಿಂದ ನಿರ್ಮಿಸಲಾದ ಸುಂದರವಾದ ಮದುವೆ ಮಂಟಪ ಎಲ್ಲಾ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ರಾಜ ವೀರರಾಜೇಂದ್ರನ ಸಹೋದರಿ ದೇವಮ್ಮಾಜಿಯ ವಿವಾಹಕ್ಕೆ ಈ ಮಂಟಪವನ್ನು ನಿರ್ಮಿಸಲಾಯಿತೆಂದು ಹೇಳಲಾಗುತ್ತಿದೆ. ಮುಂದೆ ಅರಮನೆಯ ಮೆಟ್ಟಿಲೇರಿದರೆ ಎಡಕ್ಕೆ ದೊಡ್ಡ ಚಾವಡಿ, ಕೆಳ ಅಂತಸ್ತಿನಲ್ಲಿ ಐದಾರು ಕೊಠಡಿಗಳು ಗೋಚರಿಸುತ್ತದೆ. ಆದರೆ ಅರಮನೆಯ ಮಧ್ಯಭಾಗದಲ್ಲಿರುವ ಕೋಣೆಯ ಗೋಡೆಗೆ ಅಳವಡಿಸಿರುವ ಏಳೆಂಟು ರಂಧ್ರಗಳ ಕಿಟಕಿ ಮಾತ್ರ ಪ್ರವಾಸಿಗರನ್ನು, ನೋಡುಗರನ್ನು ಒಂದು ಕ್ಷಣ ತಡೆದು ನಿಲ್ಲಿಸುವದಂತೂ ಖಚಿತ. ಮಾರ್ಗದರ್ಶಿಯ ಮಾತಿನಂತೆ ಈ ಕಿಟಕಿಯ ಯಾವದೇ ರಂಧ್ರದ ಮೂಲಕ ಬಂದೂಕಿನ ನಳಿಕೆಯನ್ನು ತೂರಿಸಿ ಗುಂಡು ಸಿಡಿಸಿದರೂ ಹೆಬ್ಬಾಗಿಲಿನ ಮೂಲಕ ನುಗ್ಗಿ ಬರುವ ಶತ್ರುವಿನ ಎದೆ ಸೀಳಲಿದೆ.

ಕೆಳಗಿನಿಂದ ಮೇಲಂತಸ್ತಿಗೆ ಸಾಗುವ ಮರದ ಏಣಿ ಏರಿದರೆ ರಾಜನ ದರ್ಬಾರ್ ಹಾಲ್ ಎದುರಾಗುತ್ತದೆ. ಒಳಗಿನ ಚಾವಡಿಯ ಎರಡು ಬದಿಯಲ್ಲಿರುವ ರಾಜ ಮತ್ತು ರಾಣಿಯರ ಪ್ರತ್ಯೇಕ ಕೊಠಡಿಗಳು ಈ ಕೋಣೆಗಳ ಗೋಡೆಗಳಲ್ಲಿ ಅಪರೂಪದ ಕಲಾಕೃತಿಗಳನ್ನು ಕಾಣಬಹುದು. ಶಿಥಿಲಾವಸ್ಥೆಯಿಂದ ಕೂಡಿದ ಈ ಅರಮನೆಯ ಕೆಲವು ಭಾಗಕ್ಕೆ ಸಿನಿಮಾ ಚಿತ್ರೀಕರಣ ತಂಡದವರು ಹಚ್ಚಿದ ಬಣ್ಣ ಬಿಟ್ಟರೆ ಉಳಿದಂತೆ ಇಲ್ಲಿ ಯಾವದೇ ಬದಲಾವಣೆ ಆಗಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸರಕಾರ ಐತಿಹಾಸಿಕ ಸ್ಮಾರಕಗಳ, ಕಟ್ಟಡಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಕ್ರಮ ಕೈಗೊಂಡಿರುವದರಿಂದ ಇಂಟೆಕ್ ಸಂಸ್ಥೆ ಈ ಅರಮನೆಯ ಉಸ್ತುವಾರಿ ವಹಿಸಿಕೊಂಡು ಇಲ್ಲಿರುವ ಕಲಾಕೃತಿಗಳನ್ನು ಸ್ವಚ್ಛಗೊಳಿಸಿ ರಕ್ಷಿಸುವ ಕೆಲಸಮಾಡುತ್ತಿದೆ. ಈಗ ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ಪ್ರವಾಸಿಗರಿಗೆ ಶುಲ್ಕ ರಹಿತ ಪ್ರವೇಶಕ್ಕೆ ಅವಕಾಶವಿದೆ. ಮಾಹಿತಿಗೆ ಮಾರ್ಗಸೂಚಕರ ಮತ್ತು ಕಾವಲುಗಾರರ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಮೂಲಭೂತ ಸೌಕರ್ಯ ಇಲ್ಲ: ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯವಿಲ್ಲದ ಬಗ್ಗೆ ಪ್ರವಾಸಿಗರು ‘ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ನಾಮಫಲಕ, ರಸ್ತೆ ಸೂಚನಾಫಲಕ ಇಲ್ಲದಿರುವದರೊಂದಿಗೆ ರಸ್ತೆ ಸಂಪೂರ್ಣ ಹದಗೆಟ್ಟರುವದು ಆಕ್ಷೇಪಕ್ಕೆ ಕಾರಣವಾಗಿದೆ. ಇದರೊಂದಿಗೆ ಸರಕಾರ ಅರಮನೆಯ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಚಿತ್ರ ತಂಡದ ವಿರುದ್ಧ ಸ್ಥಳೀಯರ ಆಕ್ರೋಶ: ಕಳೆದ ಹತ್ತು ದಿನಗಳಿಂದ ಜಗದೀಶ್ವರೀ ಸಿನಿ ಕ್ರೀಯೇಶನ್ಸ್ ವತಿಯಿಂದ ನಾಲ್ಕು ನಾಡು ಅರಮನೆಯಲ್ಲಿ ನಡೆಯುತ್ತಿರುವ ‘ರಿವಿಲ್’ ಕನ್ನಡ ಚಲನಚಿತ್ರ ಚಿತ್ರೀಕರಣ ತಂಡದಿಂದ ಸ್ಥಳೀಯರಿಗೆ, ಪ್ರವಾಸಿಗರಿಗೆ, ಸ್ಥಳೀಯ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಇವರು ತಡರಾತ್ರಿವರೆಗೆ ಚಿತ್ರೀಕರಣ ನಡೆಸುತ್ತಿರುವ ಬಗ್ಗೆ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಮಡಿಕೇರಿ ಪುರಾತತ್ವ ಇಲಾಖೆಯ ಅಧಿಕಾರಿ ರೇಖಾ ಅವರ ಗಮನ ಸೆಳೆದಿದ್ದಾರೆ.

ಮೈಸೂರು ಪುರಾತತ್ವ ಇಲಾಖೆಯಿಂದ ಪರವಾನಿಗೆ ನೀಡಲಾಗಿದೆ ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದಿದ್ದಾರೆ ಅಧಿಕಾರಿ. ಇದಕ್ಕೆ ಉತ್ತರಿಸಿದ ಸಂತು ಸುಬ್ರಮಣಿ ಮೈಸೂರಿನ ಕಚೇರಿಯಿಂದ ಕೊಡಗಿನ ಸ್ಥಳಗಳ ವೀಕ್ಷಣೆ ಬಗ್ಗೆ ಅನುಮತಿ ನೀಡುವದು ಸರಿಯಿಲ್ಲ. ಇಲ್ಲಿನ ಜನರ ಭಾವನೆಗಳಿಗೆ ಸ್ಪಂದಿಸುವಂತಹ ಕಾರ್ಯಗಳನ್ನು ಅಧಿಕಾರಿಗಳು ಮಾಡಬೇಕು ತಪ್ಪಿದ್ದಲ್ಲಿ ಸಾಮೂಹಿಕ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉದ್ಘಾಟನೆಗೊಳ್ಳದ ಶೌಚಾಲಯ: ಪ್ರವಾಸಿಗರ ಅನುಕೂಲಕ್ಕಾಗಿ ಕಳೆದ ಐದು ವರ್ಷಗಳ ಹಿಂದೆಯೇ ಇಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೂ ನೀರಿನ ಸೌಲಭ್ಯ ಹಾಗೂ ಮತ್ತಿತರ ಅನಾನುಕೂಲತೆಯಿಂದ ಈ ಶೌಚಾಲಯ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಮಾನವೀಯತೆ ದೃಷ್ಟಿಯಿಂದ ವೃದ್ಧರು ಮತ್ತು ಮಕ್ಕಳಿಗೆ ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಶೌಚಾಲಯ ನೀಡುತ್ತಿದ್ದಾರೆ.

- ಪಿ.ವಿ. ಪ್ರಭಾಕರ್