ಪೊನ್ನಂಪೇಟೆ, ಡಿ. 4: ವೀರಾಜಪೇಟೆ ತಾಲೂಕಿನ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಜಿ.ಪಂ. ಸದಸ್ಯ ಬಾನಂಗಡ ಎನ್. ಪ್ರಥ್ಯು ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲೇ ಅತೀ ದೊಡ್ಡ ಜಿ.ಪಂ. ಕ್ಷೇತ್ರವಾಗಿರುವ ಬಾಳೆಲೆ ಜಿ.ಪಂ. ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಮುಂದೆಯೂ ಗ್ರಾಮೀಣ ಅಭಿವೃದ್ಧಿಗಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಾವಧಿಯನ್ನು ಮೀಸಲಿಡಲಾಗುವದು ಎಂದು ಹೇಳಿದರು.
ಕೊಡಗಿನ ಗ್ರಾಮೀಣ ಭಾಗದ ರಸ್ತೆ ಸುಧಾರಣೆಗಾಗಿ ಮುಖ್ಯಮಂತ್ರಿಗಳು ತಮ್ಮ ವಿಶೇಷ ನಿಧಿಯಲ್ಲಿ ರೂ. 50 ಕೋಟಿ ನೀಡಿದ್ದಾರೆ. ಎಲ್ಲಾ ಅನುದಾನ ಸಮರ್ಪಕವಾಗಿ ಬಳಕೆಯಾಗಲು ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಸಾರ್ವಜನಿಕರ ಸಮನ್ವಯತೆ ಅಗತ್ಯವಿದೆ ಎಂದರು.
ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಆಲಂದೋಡು ರಸ್ತೆ, ಪನ್ಯರಸ್ತೆ ಮತ್ತು ಚಂಗುಲಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಸೇರಿದಂತೆ ಒಟ್ಟು ರೂ. 40 ಲಕ್ಷ ಕಾಮಗಾರಿಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ರಸ್ತೆ ಸುಧಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಜನರ ಬೇಡಿಕೆಯ ಅನುಗುಣವಾಗಿ ತೀರಾ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಮಾರಂಭದಲ್ಲಿ ತಾ.ಪಂ. ಸದಸ್ಯ ಪೆÇಯಿಲೇಂಗಡ ಪಲ್ವಿನ್ ಪೂಣಚ್ಚ, ಕೆ. ಬಾಡಗ ಗ್ರಾ.ಪಂ. ಅಧ್ಯಕ್ಷೆ ಕೆ.ಎಂ ಉಷಾ, ನಾಲ್ಕೇರಿ ಗ್ರಾ.ಪಂ. ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ, ಸದಸ್ಯರಾದ ಜೆ.ಎ. ಅಣ್ಣಯ್ಯ, ಜೆ.ಎ. ಜಯ, ಕೆ. ಬಾಡಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೆಲ್ವಿನ್ ಜಯಕುಮಾರ್ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.