ಮಡಿಕೇರಿ, ಡಿ. 4: ಕುಶಾಲನಗರದ ಎಸ್.ಎಂ.ಎಸ್. ಮೀಡಿಯಾ ಫ್ರೆಂಡ್ಸ್ ವತಿಯಿಂದ ತಾ. 31 ರಂದು ದ್ವಿತೀಯ ವರ್ಷದ ಜಿಲ್ಲಾಮಟ್ಟದ ಪತ್ರಕರ್ತರ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕ ಕೆ.ಟಿ. ಶ್ರೀನಿವಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ, ಕ್ರೀಡೆಯ ಮೂಲಕ ತಮ್ಮೆಲ್ಲಾ ಒತ್ತಡಗಳನ್ನು ಕಳೆದುಕೊಂಡು ನಿರಾಳರಾಗಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆಯೋಜಿತ ಕ್ರಿಕೆಟ್ ಪಂದ್ಯಾವಳಿ ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಜಿಲ್ಲೆಯ ವಿವಿಧೆಡೆಗಳ 6 ಪತ್ರಕರ್ತರ ತಂಡಗಳು ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.

ಪಂದ್ಯಾವಳಿ ವಿಜೇತ ತಂಡಕ್ಕೆ ರೂ. 10 ಸಾವಿರ ನಗದು, ದ್ವಿತೀಯ ತಂಡಕ್ಕೆ ರೂ. 5 ಸಾವಿರ, ತೃತೀಯ ತಂಡಕ್ಕೆ ರೂ. 3 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವನ್ನಾಗಿ ನೀಡಲಾಗುತ್ತದೆ. ಇದರೊಂದಿಗೆ ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಉತ್ತಮ ಹಿಡಿತಗಾರ, ಉತ್ತಮ ಕ್ಷೇತ್ರ ರಕ್ಷಣೆಗಾರ, ಸರಣಿ ಪುರುಷೋತ್ತಮ ಹಾಗೂ ಪಂದ್ಯ ಶ್ರೇಷ್ಟ ಬಹುಮಾನಗಳನ್ನು ನೀಡಲಾಗುತ್ತದೆ. ಅಲ್ಲದೆ, ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಆಕರ್ಷಕ ಟ್ರೋಫಿ ನೀಡಲಾಗುವದು ಎಂದು ಕೆ.ಟಿ. ಶ್ರೀನಿವಾಸ್ ತಿಳಿಸಿದರು.

ಪಂದ್ಯಾವಳಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆ.ಟಿ. ಶ್ರೀನಿವಾಸ್ ಮೊ. 9008955439, ಮಹಮ್ಮದ್ ಮುಸ್ತಫಾ ಮೊ. 9902318081, ಕೆ.ಜೆ. ಶಿವರಾಜ್- 8123817025 ಸಂಪರ್ಕಿಸಹುದೆಂದು ತಿಳಿಸಿದರು.

ಗೋಷ್ಠಿಯಲ್ಲಿ ಎಸ್‍ಎಂಎಸ್ ಮೀಡಿಯಾ ಫ್ರೆಂಡ್ಸ್‍ನ ಮಹಮ್ಮದ್ ಮುಸ್ತಫಾ, ಕೆ.ಜೆ. ಶಿವರಾಜ್, ಹರೀಶ್‍ಗೌಡ ಉಪಸ್ಥಿತರಿದ್ದರು.