ಮಡಿಕೇರಿ, ಡಿ. 4: ಹುತ್ತರಿ ಮರುದಿನವಾದ ಇಂದು ಕೊಡಗಿನ ಎಲ್ಲೆಡೆ ಸಾಂಪ್ರದಾಯಿಕ ಹುತ್ತರಿ ಕೋಲಾಟ ನೆರವೇರಿತು. ಸೂರ್ಲಬ್ಬಿ, ಗರ್ವಾಲೆ, ಮಾದಾಪುರ, ಹೊರಮಾಲೆ, ಮುತ್ತ್‍ನಾಡು, ಹಾಲೇರಿ, ಭಾಗಮಂಡಲ ಮುಂತಾದೆಡೆಗಳಲ್ಲಿ ಆಯಾ ನಾಡಿನ ಪೂಮಾಲೆ ಮಂದ್‍ಗಳಲ್ಲಿ ಇಂದು ಸಂಪ್ರದಾಯದಂತೆ ಗ್ರಾಮಸ್ಥರು ಹುತ್ತರಿ ಕೋಲಾಟದಲ್ಲಿ ಪಾಲ್ಗೊಂಡಿದ್ದರು.

ಸೂರ್ಲಬ್ಬಿ, ಮುಟ್ಲು, ಕುಂಬಾರಗಡಿಗೆ, ಮಂಕ್ಯ, ಕಿಕ್ಕರಳ್ಳಿ ಗ್ರಾಮಸ್ಥರು ಮೇದುರ ಕುಟುಂಬದ ತಕ್ಕಾಮೆಯಲ್ಲಿ ಇಂದು ಅಲ್ಲಿನ ತೊತ್ತಂಗಡ ಮಂದ್‍ನಲ್ಲಿ ಸಾಂಪ್ರದಾಯಿಕ ಹುತ್ತರಿ ಕೋಲಾಟ ನೆರವೇರಿಸಿದರು.

ಭಾಗಮಂಡಲ, ತಣ್ಣಿಮಾನಿ, ತಾವೂರು, ಕೋರಂಗಾಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹುತ್ತರಿ ಕೋಲಾಟದೊಂದಿಗೆ ಶ್ರೀ ಭಗಂಡೇಶ್ವರ ಸನ್ನಿಧಿಯಲ್ಲಿ ಕೋಲು ಒಪ್ಪಿಸುವ ಮೂಲಕ ಸಮಾಪನಗೊಳಿಸಿದರು. ಮಾತ್ರವಲ್ಲದೆ ಇಂದು ಜಿಲ್ಲೆಯ ಅನೇಕ ಕಡೆಗಳಲ್ಲಿ ಸಾಂಪ್ರದಾಯಿಕ ಹುತ್ತರಿ ಕೋಲಾಟ ಹಾಗೂ ಮನೆ ಮನೆ ಬಾಳೋಪಾಟ್‍ನೊಂದಿಗೆ ಗ್ರಾಮೀಣ ಜಾನಪದ ಕಲೆಗಳ ಸಾಮೂಹಿಕ ಪ್ರದರ್ಶನ ನಡೆದ ಕುರಿತು ಮಾಹಿತಿ ಲಭಿಸಿದೆ.

ಮಡಿಕೇರಿ: ಇಲ್ಲಿನ ಕೋಟೆ ಆವರಣದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ, ತಕ್ಕರಾದ ಪಾಂಡೀರ ಕುಟುಂಬ ಹಾಗೂ ಕೊಡವ ಸಮಾಜದ ಸಹಯೋಗದೊಂದಿಗೆ ಸಾಂಪ್ರದಾಯಿಕ ಹುತ್ತರಿ ಕೋಲಾಟ ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪಾಂಡೀರ ಕುಟುಂಬಸ್ಥರಿಗೆ ಸೂತಕ ಇರುವ ಕಾರಣಕ್ಕಾಗಿ ಅವರ ಬದಲಿಗೆ ಚೆಟ್ಟೀರ ಕುಟುಂಬಸ್ಥರು ಕಾರ್ಯಕ್ರಮ ನಡೆಸಿಕೊಟ್ಟರು. ಕೊಡವ ಸಮಾಜದ ವತಿಯಿಂದ ಉಮ್ಮತ್ತಾಟ್, ಕೋಲಾಟ, ಬೊಳಕಾಟ, ಪರೆಯಕಳಿ, ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ವೀಣಾ ಅಚ್ಚಯ್ಯ ಅವರುಗಳು ರಾಜ್ಯದ ಎಲ್ಲ ಜಿಲ್ಲೆಗಳಿಗಿಂತÀ ಕೊಡಗು ಜಿಲ್ಲೆ ವಿಭಿನ್ನವಾಗಿದ್ದು, ಇಲ್ಲಿನ ಸಾಂಪ್ರದಾಯಿಕ ಹಬ್ಬ ಹುತ್ತರಿಗೆ ವಿಶೇಷ ಪ್ರಾಧಾನ್ಯತೆ ಇದೆ. ಹುತ್ತರಿ ಹಬ್ಬದ ಮರುದಿನ ಆಚರಿಸಲ್ಪಡುವ ಹುತ್ತರಿ ದೇವರ ಹುತ್ತರಿ ಕೋಲಾಟ ವಿಶೇಷವಾದುದು. ಊರಿನವರೆಲ್ಲರೂ ಸೇರಿ ಆಚರಿಸುವ ಹಬ್ಬ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ, ಉಳಿಸಿ-ಬೆಳೆಸುವ ಕಾರ್ಯವಾಗಬೇಕು. ಸಮಾಜಗಳು, ಅಕಾಡೆಮಿಗಳು ಈ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡಬೇಕೆಂದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ದೇವಯ್ಯ, ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಕಾರ್ಯನಿರ್ವಹಣಾಧಿಕಾರಿ ಸಂಪತ್ ಕುಮಾರ್, ಪಾಂಡಿರ ಕುಟುಂಬದ ಪಟ್ಟೆದಾರ ಮೇದಪ್ಪ, ಮೊಣ್ಣಪ್ಪ, ಚೆಟ್ಟೀರ ಕಾರ್ಯಪ್ಪ, ನಂಜಪ್ಪ, ಮೇದಪ್ಪ ಇನ್ನಿತರರಿದ್ದರು. ಚೆಟ್ಟೀರ ಗ್ರಂಥ ಕಾರ್ಯಪ್ಪ ಪ್ರಾರ್ಥಿಸಿದರು.