ಮಡಿಕೇರಿ, ಡಿ. 4: ಅಬಕಾರಿ ರಕ್ಷಕ ಹುದ್ದೆಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆ ತಾ. 7 ರಂದು ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು, ದೈಹಿಕ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಲೋಕಸೇವಾ ಆಯೋಗ ಕಳುಹಿಸಿರುವ ಮಾನದಂಡದ ಮೇಲೆ ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾದಿಕಾರಿ ಎಂ. ಸತೀಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ದೈಹಿಕ ಪರಿಕ್ಷೆಗೆ ಬರುವ ಅಭ್ಯರ್ಥಿಗಳ ವೀಡಿಯೋ ಚಿತ್ರೀಕರಣ ಮಾಡಬೇಕು. ಹಾಗೆಯೇ ಅಬಕಾರಿ ಇಲಾಖೆಯಲ್ಲಿರುವವರೆ ಜವಾಬ್ದಾರಿ ವಹಿಸಿಕೊಂಡು ಮಾಡಬೇಕು. ತಾ. 7 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆಗೆ ನಡೆಯಲಿದೆ ಎಂದು ತಿಳಿಸಿದರು. ಅಬಕಾರಿ ಜಿಲ್ಲಾಧಿಕಾರಿ ಖುರ್ಷಿದ್ ಬೇಗಂ, ಅಬಕಾರಿ ನಿರೀಕ್ಷಕ ಸಂಪತ್ ಕುಮಾರ್, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಭಾಯಿ, ಜಿಲ್ಲಾ ಸರ್ಜನ್ ಅಜೀಜ್, ಅಬಕಾರಿ ಇಲಾಖೆಯ ಸಿಬ್ಬಂದಿ ಮಧುಸೂದನ್ ಮತ್ತು ಇತರರು ಇದ್ದರು.