ನಾಪೋಕ್ಲು, ಡಿ. 2: ಸ್ಥಳೀಯ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ ಉದಿಯಂಡ ಪದ್ಮಜಾ ಸುಭಾಶ್ ಅವರನ್ನು ಸನ್ಮಾನಿಸಿ, ಬೀಳ್ಕೊಡಲಾಯಿತು.

ಇಲ್ಲಿನ ಕಾಲೇಜಿನಲ್ಲಿ 16 ವರ್ಷ 5 ತಿಂಗಳು ಸೇವೆ ಸೇರಿದಂತೆ ಒಟ್ಟು 33 ವರ್ಷ 6 ತಿಂಗಳು ಸೇವೆ ಸಲ್ಲಿಸಿ ನವೆಂಬರ್ 30 ರಂದು ಅವರು ನಿವೃತ್ತಿ ಹೊಂದಿದರು. ಕಾಲೇಜಿನ ಪ್ರಬಾರ ಪ್ರಾಂಶುಪಾಲೆ ನಳಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದ್ಮಜಾ ಅವರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.

ಈ ಸಂದರ್ಭ ಶಾಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪದ್ಮಜಾ ಅವರ ಸೇವೆಯನ್ನು ಸ್ಮರಿಸಿದರು. ಸನ್ಮಾನ ಸ್ವೀಕರಿಸಿದ ಪದ್ಮಜಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ನಾಯಕ ಶ್ರೀನಿವಾಸ್ ಸ್ವಾಗತಿಸಿ, ವಿಶ್ವಾಸ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಸಿ.ಯು. ಸರಳಾ, ಕೆ.ಎಂ. ರೀಟಾ, ಕೆ.ಟಿ. ಕೃಪಾ, ಕೆ.ಜಿ. ದಿವಾಕರ, ಪೂಣಚ್ಚ, ಶೈಲಜಾ ,ಅತಿಥಿ ಉಪನ್ಯಾಸಕರಾದ ಅಶ್ವಿನಿ, ಮುತ್ತಮ್ಮ, ಪೂಜ ಮುತ್ತಪ್ಪ ಕಂಪ್ಯೂಟರ್ ಶಿಕ್ಷಕ ಮಂಜುನಾಥ್ ಮತ್ತಿತರರಿದ್ದರು.