ಗೋಣಿಕೊಪ್ಪ ವರದಿ, ಡಿ. 2: ಲಯನ್ಸ್ ವತಿಯಿಂದ ಲೋಪಮುದ್ರ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಡಯಾಲಿಸೀಸ್ ಕೇಂದ್ರದಿಂದ ಬಡವರಿಗೆ ಮತ್ತಷ್ಟು ಸೇವೆ ಸಿಗುವಂತಾಗಲು ರೂ. 50 ಸಾವಿರ ನಿಧಿ ಸ್ಥಾಪಿಸುವ ಚಿಂತನೆ ಇದೆ ಎಂದು ಲಯನ್ಸ್ ವಿಭಾಗ ರಾಜ್ಯಪಾಲ ಹೆಚ್. ಆರ್. ಹರೀಶ್ ಹೇಳಿದರು.

ಸ್ಥಳೀಯ ಲಯನ್ಸ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭ ಪರಿಮಳ ಮಂಗಳ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹೆಚ್ಚು ಹಣ ಕ್ರೋಡಿಕರಿಸಿ ಬಡ್ಡಿ ಹಣದಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವದು ಎಂದರು.

ಗ್ರಾಮಾಂತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ದೃಷ್ಟಿಯಿಂದ ಬಿರುನಾಣಿ ಸುಜ್ಯೋತಿ ವಿದ್ಯಾಸಂಸ್ಥೆ ಯನ್ನು ಗೋಣಿಕೊಪ್ಪ ಲಯನ್ಸ್ ಕ್ಲಬ್ ದತ್ತು ಪಡೆದು ಅಭಿವೃದ್ದಿ ಪಡಿಸುತ್ತಿದೆ. ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ವಂಚಿತರಾಗದಂತೆ ಚಿಂತಿಸಲಾಗಿದೆ.

ದೃಷ್ಟಿ ಮೊದಲು ಎಂಬ ಧ್ಯೇಯದೊಂದಿಗೆ ಹಲವಾರು ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಸಕ್ಕರೆ ಕಾಯಿಲೆ ರೋಗಿಗಳು ಹೆಚ್ಚಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಿ ರೋಗ ನಿಯಂತ್ರಣಕ್ಕೆ ಮುಂದಾಗುವದಾಗಿ ತಿಳಿಸಿದರು. ‘ಹಸಿವು ಮುಕ್ತ ಭಾರತ' ಕಾರ್ಯಕ್ರಮದಡಿ ಕ್ಲಬ್ ಹಾಗೂ ಇಸ್ಕಾನ್ ಸಂಸ್ಥೆ 2 ಲಕ್ಷ 50 ಸಾವಿರ ಶಾಲೆಯ ಮಕ್ಕಳಿಗೆ ಬಿಸಿ ಊಟ ನೀಡಲು ನಿರ್ಧರಿಸಿದೆ.

ಸಂಸ್ಥೆ ವಿಶ್ವದ್ಯಾದಂತ 46 ಸಾವಿರ ಶಾಖೆಗಳೊಂದಿಗೆ 14 ಲಕ್ಷ ಸದಸ್ಯರು ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಿದಾರೆ. 4 ಜಿಲ್ಲೆಗಳ 3500 ಸದಸ್ಯರುಗಳು ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಗೆ 65 ಲಕ್ಷ ದೇಣಿಗೆಯನ್ನು ನೀಡಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ಹೊಸ ಸಂಸ್ಥೆಯನ್ನು ಅಮ್ಮತ್ತಿಯಲ್ಲಿ ಸ್ಥಾಪಿಸಲಾಗಿದೆ ಎಂದರು. ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮೆಯಂಡ ಪೂಣಚ್ಚ ಮಾತನಾಡಿ, ಲಯನ್ಸ್ ಶಾಲೆ ಗುಣಮಟ್ಟದ ಶಿಕ್ಷಣದ ಜೊತೆಗೆ ಹಲವಾರು ಮಂದಿಗೆ ಉದ್ಯೋಗ ನೀಡಿರುವದು ಸಂತೋಷದ ವಿಚಾರ ಎಂದರು.

ಈ ಸಂದರ್ಭ ಲಯನ್ಸ್ ವಿಭಾಗದ ಪ್ರಥಮ ಮಹಿಳೆ ನಮಿತಾ ಹರೀಶ್, ಕಾರ್ಯದರ್ಶಿ ಪ್ರಣಿತ ಪೂಣಚ್ಚ, ಪದಾಧಿಕಾರಿಗಳಾದ ಸವಿತಾ ಪೆಮ್ಮಯ್ಯ, ಎಂ.ಎಂ ಗಣಪತಿ, ಜೆ. ಎಸ್ ಮಾದಪ್ಪ, ಬೋಸ್ ಪೆಮ್ಮಯ್ಯ. ಕೊಂಗಂಡ ಸುಬ್ಬಯ್ಯ ಇದ್ದರು.