ಒಡೆಯನಪುರ, ಡಿ. 2: ಹನುಮ ಜಯಂತಿ ಪ್ರಯುಕ್ತ ಶನಿವಾರಸಂತೆ ಶ್ರೀರಾಮಮಂದಿರದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ಸಂಜೆ ಶ್ರೀರಾಮಚಂದ್ರ, ಶ್ರೀ ಸೀತಾಲಕ್ಷ್ಮಿ, ಶ್ರೀ ಲಕ್ಷ್ಮಣ ಹಾಗೂ ರಾಮಭಕ್ತ ಶ್ರೀ ಆಂಜನೇಯ ದೇವರ ಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ಕ್ಷೀರಾಭಿಷೇಕ ಸಲ್ಲಿಸಲಾಯಿತು. ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿಗೆ ಹೋಮ ಹವನ ಹಾಗೂ ವಿಶೇಷ ಪೂಜಾ ವಿಧಿ ವಿಧಾನವನ್ನು ನಡೆಸಲಾಯಿತು. ಈ ಸಂದರ್ಭ ನೂರಾರು ಭಕ್ತರು ಶ್ರೀಹನುಮ ಜಪ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಹಿಳಾ ಭಕ್ತರು ಹನುಮ ಜಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನದಾನ ಏರ್ಪಡಿಸಲಾಯಿತು. ಪೂಜಾ ವಿಧಿ ವಿಧಾನವನ್ನು ಅರ್ಚಕ ನಾಗೇಶ್‍ಭಟ್ ನೇತೃತ್ವದಲ್ಲಿ ಗೋಪಾಲಪುರ ಬನಶಂಕರಿ ದೇವಾಲಯದ ಅರ್ಚಕ ಕೆ.ಎನ್. ನಾಗೇಶ್, ಬಾಗೇರಿ ದೇವಾಲಯದ ಶಂಕರನಾರಾಯಣ ಭಟ್, ಕೆಂಚಮ್ಮನಹೊಸಕೋಟೆಯ ಶ್ರೀಕೆಂಚಾಂಬಿಕಾ ದೇವಾಲಯದ ಅರ್ಚಕ ರಾಮಸ್ವಾಮಿ, ರಾಮಚಂದ್ರ ತಂಡದವರು ನೆರವೇರಿಸಿಕೊಟ್ಟರು.