ಮಡಿಕೇರಿ, ಡಿ. 2: ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಚೇರಂಬಾಣೆಯ ಆಶ್ರಯದಲ್ಲಿ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ನಾಟೋಳಂಡ ಚೋಂದಮ್ಮ ದೇವಯ್ಯ ಸ್ಮರಣಾರ್ಥ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶಟಲ್ ಬ್ಯಾಡ್‍ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಚೆಸ್ ಪಂದ್ಯಗಳು ನಡೆದವು.
ನಿವೃತ್ತ ಕರ್ನಲ್ ತೇಲಪಂಡ ಮುತ್ತಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ವಿಭಾಗಕ್ಕೆ ಜಿಲ್ಲೆಯಿಂದ 10 ಸ್ಪರ್ಧಿಗಳು, ಚೆಸ್ ವಿಭಾಗಕ್ಕೆ 30 ಸ್ಪರ್ಧಿಗಳು ಮತ್ತು ಶಟಲ್ ಬ್ಯಾಡ್‍ಮಿಂಟನ್ ವಿಭಾಗಕ್ಕೆ 32 ಸ್ಪರ್ಧಿಗಳು ಭಾಗವಹಿಸಿದ್ದರು.
ಟೇಬಲ್ ಟೆನ್ನಿಸ್ ಬಾಲಕರ ವಿಭಾಗದಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತುಶಾರ್ ಮತ್ತು ಕೀರ್ತನ್ ಪ್ರಥಮ ಮತ್ತು ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಸೆಂಟ್ ಮೇರಿಸ್ ಪ್ರೌಢಶಾಲೆ ಸುಂಟಿಕೊಪ್ಪದ ವಿದ್ಯಾರ್ಥಿನಿಯರಾದ ಇಶಾ ಮತ್ತು ಪ್ರಕೃತಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡರು.
ಚೆಸ್ ಪಂದ್ಯದಲ್ಲಿ ಬಾಲಕರ ವಿಭಾಗದಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ಅಕ್ಷಯ್ ಪ್ರಥಮ ಹಾಗೂ ಸರಕಾರಿ ಪ್ರೌಢಶಾಲೆ ಹೆಗ್ಗಳದ ಕಿಶೋರ್ ದ್ವಿತೀಯ, ಬಾಲಕಿಯರ ಪಂದ್ಯಾಟದಲ್ಲಿ ಕುಶಾಲನಗರದ ಫಾತೀಮ ಕಾನ್ವೆಂಟ್ ಪ್ರೌಢಶಾಲೆಯ ಪ್ರಿಯಾಂಕ ನಾರಾಯಣ್ ಪ್ರಥಮ ಹಾಗೂ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಅನ್ನಪೂರ್ಣ ದ್ವಿತೀಯ ಬಹುಮಾನ ಪಡೆದುಕೊಂಡರು.
ಶೆಟಲ್ ಬ್ಯಾಡ್‍ಮಿಂಟನ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ನಾಪೋಕ್ಲು ಶ್ರೀ ರಾಮ ಟ್ರಸ್ಟ್‍ನ ಹಿತೇಶ್ ಪ್ರಥಮ, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಕ್ಯಾರಲ್ ಸ್ಯಾಮ್ ದ್ವಿತೀಯ ಸ್ಥಾನ ಪಡೆದುಕೊಂಡರು. ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಎಲೆನಾ ಶ್ಯಾಮ್ ಪ್ರಥಮ ಹಾಗೂ ಅರುಣ ಜೂನಿಯರ್ ಕಾಲೇಜು, ಚೇರಂಬಾಣೆ ಭೂಮಿಕ ದ್ವಿತೀಯ ಸ್ಥಾನ ಪಡೆದುಕೊಂಡರು. ಬಾಲಕರ ಡಬಲ್ಸ್ ವಿಭಾಗದಲ್ಲಿ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರಥಮ ಹಾಗೂ ಸರಕಾರಿ ಪ್ರೌಢಶಾಲೆ ಹಾಕತ್ತೂರು ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ಅರುಣ ಜೂನಿಯರ್ ಕಾಲೇಜು ಪ್ರಥಮ ಹಾಗೂ ಶ್ರೀ ರಾಜ ರಾಜೇಶ್ವರಿ ಆಂಗ್ಲ ಮಾದ್ಯಮ ಪ್ರೌಢಶಾಲೆ ಚೇರಂಬಾಣೆ ದ್ವಿತೀಯ ಸ್ಥಾನ ಪಡೆದುಕೊಂಡಿತು.