ಆಲೂರು-ಸಿದ್ದಾಪುರ/ಒಡೆಯನ ಪುರ, ಡಿ. 2: ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿಯ ವಿಶೇಷ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್ ಅಧ್ಯಕ್ಷತೆ ಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಟ್ಟಣದಲ್ಲಿ ಬಾಕಿಯಾಗಿರುವ ವಿವಿಧ ಕಾಮಗಾರಿ ಪ್ರಗತಿಯ ಬಗ್ಗೆ ಸದಸ್ಯರು ಚರ್ಚಿಸಿದರು.
ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಸಾರ್ವಜನಿಕ ಸಮುದಾಯ ಭವನ ಸೇರಿದಂತೆ ಗ್ರಾ.ಪಂ.ಗೆ ಸೇರಿದ ಕಟ್ಟಡಗಳಲ್ಲಿ ಚುನಾವಣೆ ಸಂದರ್ಭ ವಿವಿಧ ರಾಜಕಿಯ ಪಕ್ಷಗಳ ಪ್ರಚಾರ ಸಭೆ-ಸಮಾರಂಭಗಳನ್ನು ನಡೆಸಲು ಗ್ರಾ.ಪಂ.ಯಿಂದ ಅನುಮತಿ ಕೊಡದಿರುವಂತೆ ಹಾಗೂ ಪಟ್ಟಣದಲ್ಲಿರುವ ಬಾರ್-ರೆಸ್ಟೋರೆಂಟ್‍ಗಳನ್ನು ಶುಚಿತ್ವದಿಂದ ಕಾಪಾಡಿಕೊಳ್ಳದಿದ್ದರೆ ಅಂತಹ ಬಾರ್ ರೆಸ್ಟೋರೆಂಟ್ ಮಾಲೀಕರಿಗೆ ಗ್ರಾ.ಪಂ.ಯಿಂದ ನೋಟಿಸ್ ನೀಡುವಂತೆ ನಿರ್ಣಯವನ್ನು ಅಂಗೀಕರಿಸಲಾಯಿತು.
ಸಭೆಯಲ್ಲಿ ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ 15 ವರ್ಷಗಳ ಹಿಂದೆಯೇ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಜಾಗವನ್ನು ಕೋರಿ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಜಿ.ಪಂ. ಸಿಇಓ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸದರಿ ಗ್ರಾ.ಪಂ.ಗೆ ಆದೇಶ ನೀಡಿದ್ದರು. ಈ ಹಿನ್ನೆಲೆ ಗ್ರಾ.ಪಂ.ಯ ಮಾಸಿಕ ಸಭೆಯಲ್ಲಿ ನಿವೃತ್ತ ಸೈನಿಕರ ಸಂಘದ ಕಟ್ಟಡದ ಮೇಲಂತಸ್ತಿನಲ್ಲಿ ಪತ್ರಕರ್ತರ ಸಂಘದ ಕಟ್ಟಡವನ್ನು ನಿರ್ಮಿಸಿಕೊಳ್ಳಲು ಅನುಮತಿ ನೀಡುವಂತೆ ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಿ ಅಂಗೀಕರಿಸಲಾಯಿತು.
ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿ ಅಹವಾಲುಗಳನ್ನು ವಿಲೇವಾರಿ ಮಾಡಲಾಯಿತು. ಶನಿವಾರಸಂತೆ ಗ್ರಾ.ಪಂ.ಯ ಜಮಾಬಂದಿ ಸಭೆಯನ್ನು ತಾ. 19 ರಂದು ನಡೆಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಹೆಚ್.ಆರ್. ಹರೀಶ್, ಸರ್ದಾರ್ ಆಹಮದ್, ಎಸ್.ಎನ್. ಪಾಂಡು, ಸೌಭಾಗ್ಯಲಕ್ಷ್ಮಿ, ಉಷಾ ಜಯೇಶ್, ರಜನಿರಾಜು, ಗ್ರಾ.ಪಂ. ಪಿಡಿಓ ಹರೀಶ್, ಲೆಕ್ಕಾಧಿಕಾರಿ ಹರಿಣಿ, ಸಿಬ್ಬಂದಿಗಳಾದ ಪೌಜಿಯಬಾನು, ವಸಂತ್ ಮುಂತಾದವರು ಇದ್ದರು.