ಮಡಿಕೇರಿ, ಡಿ. 1: ಮಾದಾಪುರ ಜಿ.ಪಂ. ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ನಿಧಿಯ ಅನುದಾನದ ಮೂಲಕ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ವಿನಾಕಾರಣ ಬಿಜೆಪಿ ಮಂದಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸ್ಥಳೀಯ ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಆರೋಪಿಸಿದ್ದಾರೆ.

ಬಿಜೆಪಿ ಮುಖಂಡರ ವರ್ತನೆ ಹೀಗೆ ಮುಂದುವರೆದರೆ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾದಾಪುರ ಜಿ.ಪಂ. ಕ್ಷೇತ್ರಕ್ಕೆ ಮೀಸಲಾದ ಸಿಎಂ ನಿಧಿಯ ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಆದರೆ ಈ ಕಾಮಗಾರಿಗಳು ಶಾಸಕರ ಅನುದಾನದಿಂದ ನಡೆಯುತ್ತಿದೆ ಎಂದು ಸುಳ್ಳು ಹೇಳುವ ಮೂಲಕ ಬಿಜೆಪಿ ಮಂದಿ ಜನರ ಹಾದಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಕಾಮಗಾರಿಗಳಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಬಿಜೆಪಿ ಸಂಸ್ಕøತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

ಅಲ್ಲದೆ ತಮ್ಮನ್ನು ಹಾಗೂ ಸ್ಥಳೀಯ ಪಂಚಾಯಿತಿ ಸದಸ್ಯರುಗಳನ್ನು ನಿರ್ಲಕ್ಷಿಸಿ ತಮಗಿಷ್ಟ ಬಂದಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಇದರಿಂದ ಸಂಬಂಧಿಸಿದ ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರು ಕೂಡ ಅಸಹಾಯಕ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ಮಡಿಕೇರಿ ಮುಖ್ಯ ರಸ್ತೆಯಿಂದ ಹೊಸತೋಟ ಮಸೀದಿ ಮೂಲಕ ಎಸ್.ಟಿ. ಕಾಲೋನಿ ಬಟಕನಹಳ್ಳಿ ರಸ್ತೆ ಅಭಿವೃದ್ಧಿ, ಪಂಚಾಯಿತಿ ಮುಂಭಾಗ ಇರುವ ಮಠದ ರಸ್ತೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ಚರಂಡಿ ನಿರ್ಮಾಣ, ಕಾರೆಕಾಡ್ ಚರಂಡಿ ಮತ್ತು ಹೊಳೆ ಬದಿ ರಸ್ತೆಗೆ ಮೋರಿ, ಆಸ್ಪತ್ರೆ ರಸ್ತೆ ಪೋಲಿಸ್ ವಸತಿಗೃಹದ ಮುಂಭಾಗದಿಂದ ಆಸ್ಪತ್ರೆಯ ಮೋರಿಯವರೆಗೆ ಚರಂಡಿ, ಜಂಬೂರು ರಸ್ತೆ ಅಭಿವೃದ್ಧಿ, ಸಣ್ಣ ಸೇತುವೆ ತೋಡಿನ ಬಳಿ ತಡೆಗೋಡೆ ನಿರ್ಮಾಣ, ಆಶ್ರಯ ಬಾಣೆ ಚರ್ಚ್ ಪಕ್ಕದಿಂದ ಮನೆಗಳ ಹಿಂಭಾಗದಲ್ಲಿ ಚರಂಡಿ ನಿರ್ಮಾಣ, ಆಸ್ಪತ್ರೆ ಹಿಂಭಾಗ ರಸ್ತೆ ಅಗಲೀಕರಣಕ್ಕೆ ತಡೆಗೋಡೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳು ಮುಖ್ಯಮಂತ್ರಿಗಳ ನಿಧಿಯ ಅನುದಾನದಿಂದ ನಡೆದಿದೆ ಎಂದು ಕುಮುದಾ ಧರ್ಮಪ್ಪ ತಿಳಿಸಿದ್ದಾರೆ.