ಗೋಣಿಕೊಪ್ಪಲು, ಡಿ. 1: ಬಲ್ಯಮುಂಡೂರು ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯು ಪಂಚಾಯಿತಿ ಅಧ್ಯಕ್ಷ ಕೊಟ್ಟಂಗಡ ಸಿ. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ನಡಿಕೇರಿ, ತೂಚಮಕೇರಿ, ಬಲ್ಯಮುಂಡೂರು ಗ್ರಾಮಗಳ ಬಡ ವಿದ್ಯಾರ್ಥಿಗಳು ಶಾಲೆಗೆ ಬರಲು ಹಣಕಾಸಿನ ತೊಂದರೆ ಇರುವದನ್ನು ಸಭೆಯಲ್ಲಿ ಪ್ರಸ್ತಾಪಿಸಿ ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಶೇ. 25 ರ ಅನುದಾನದಲ್ಲಿ ಶಾಲೆಗೆ ಬರುವ ವಾಹನ ವೆಚ್ಚವನ್ನು ಪಂಚಾಯಿತಿಯಿಂದ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ದೂರದ ಅಂಗನವಾಡಿಗೆ ತೆರಳಿ ಮಹಿಳೆಯರು,ಗರ್ಭಿಣಿ ಬಾಣಂತಿಯರು ಮದ್ಯಾಹ್ನದ ಬಿಸಿಯೂಟ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರ ಬದಲಿಗೆ ಊಟದ ವೆಚ್ಚವನ್ನು ನೀಡುವಂತೆ ಸಭೆಯಲ್ಲಿ ಮಹಿಳೆಯರು ಪ್ರಸ್ತಾಪಿಸಿದರು.

ಮಹಿಳೆಯರಿಗೆ ಆಗುವ ತೊಂದರೆಯನ್ನು ಮನಗಂಡು ಇದರ ವೆಚ್ಚವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಸಭೆಯು ತೀರ್ಮಾನಿಸಿತು. ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಸಹಾಯಕ ನಿರ್ದೇಶಕ ಶಿವರಾಜ್ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಳ್ಳಿಚಂಡ ಪೂಣಚ್ಚ, ಮಹಿಳೆಯರ, ಮಕ್ಕಳ ಗ್ರಾಮ ಸಭೆಯ ಉದ್ದೇಶಗಳನ್ನು ತಿಳಿಸಿದರು. ಪಂಚಾಯಿತಿ ಸದಸ್ಯರಾದ ಕೋಳೇರ ಬೋಪಣ್ಣ, ಚೀರಂಡ ಸ್ವಾತಿ, ಅಜ್ಜಿಕುಟ್ಟೀರ ಪ್ರೀತಮ್ ಪೊನ್ನಪ್ಪ, ಹಾಗೂ ಕಾರ್ಯದರ್ಶಿ ಮುತ್ತಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.