ಗೋಣಿಕೊಪ್ಪ ವರದಿ, ಡಿ. 1: ಪಾಲಿಬೆಟ್ಟ ರಸ್ತೆ ಹಾಗೂ ಕಾಪ್ಸ್ ಶಾಲಾ ಆವರಣದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಓಡಿಸಲು ಅರಣ್ಯ ಸಿಬ್ಬಂದಿ ನಿನ್ನೆ ತಡ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದ ಘಟನೆ ನಡೆದಿದೆ.

ಇಲ್ಲಿ ಬೀಡುಬಿಟ್ಟಿದ್ದ ನಾಲ್ಕು ಕಾಡಾನೆಗಳನ್ನು ಕಾಡಿಗಟ್ಟಲು ತಿತಿಮತಿ, ಪೊನ್ನಂಪೇಟೆ ಆರ್‍ಆರ್‍ಟಿ ಅರಣ್ಯ ಇಲಾಖೆ ಕಾರ್ಯಾಚರಣೆ ತಂಡ ಹರಸಾಹಸ ಪಟ್ಟಿತು. ಬುಧವಾರ ಸಂಜೆ ಅತ್ತೂರು ಗ್ರಾಮದ ಮೂಲಕ ಪಟ್ಟಣದ ಕಾಪ್ಸ್ ಶಾಲಾ ಆವರಣ ಹಾಗೂ ಪಾಲಿಬೆಟ್ಟ ಮುಖ್ಯ ರಸ್ತೆಯಲ್ಲಿ 4 ಆನೆಗಳು ಅಡ್ಡಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು. ಇದರಿಂದಾಗಿ ಕಾರ್ಯಾಚರಣೆ ತಂಡವು ಜನರ ಜೀವ ರಕ್ಷಣೆಗೆ ಮುಂದಾಯಿತು. ರಾತ್ರಿ 10 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಆನೆಗಳನ್ನು ಟಾಟಾ ಕಾಫಿ ತೋಟದತ್ತ ಓಡಿಸಿದರು.

ಕತ್ತಲು ಆಗುತ್ತಿದ್ದಂತೆ ಕಾರ್ಯಾ ಚರಣೆ ತಂಡದ ಮೇಲೆರಗಲು ಪ್ರಯತ್ನ ನಡೆಸಿತ್ತು. ಆದರೂ ಹಿಮ್ಮೆಟ್ಟಲು ಮುಂದಾದ ತಂಡವು ಜನನಿಬಿಡ ಪ್ರದೇಶದಿಂದ ಓಡಿಸುವಲ್ಲಿ ಯಶಸ್ವಿ ಯಾಗಿದೆ. ರಾತ್ರಿ ನಡೆಸಿದ ಕಾರ್ಯಾ ಚರಣೆಯಿಂದಾಗಿ ಗ್ರಾಮಸ್ಥರು ತಂಡದ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.