ಸಿದ್ದಾಪುರ, ಡಿ. 1: ಮಾಲ್ದಾರೆ ಹಾಗೂ ಮೈಲಾತ್‍ಪುರ ವ್ಯಾಪ್ತಿಯಲ್ಲಿ ಕಳೆದ 5 ತಿಂಗಳುಗಳಿಂದ ಜಾನುವಾರುಗಳ ಮೇಲೆ ಹುಲಿಯ ಧಾಳಿ ಮುಂದುವರೆದಿದ್ದು, ಗ್ರಾಮಸ್ಥರು ಭಯದ ವಾತವರಣದಲ್ಲಿ ಬದುಕ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಾಲ್ದಾರೆಯ ಹಾಗೂ ಮೈಲಾತ್‍ಪುರ ವ್ಯಾಪ್ತಿಯಲ್ಲಿ ಆಗಿಂದಾಗಿ ಹುಲಿಯು ಪ್ರತ್ಯಕ್ಷ ಗೊಳ್ಳುತ್ತಿದ್ದು, ಜಾನುವಾರುಗಳ ಮೇಲೆ ನಿರಂತರವಾಗಿ ಹುಲಿ ಧಾಳಿ ನಡೆಸುತ್ತಿದೆ. ಈಗಾಗಲೇ ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಡಾನೆ ಧಾಳಿಯಿಂದ ಕಂಗೆಟ್ಟಿರುವ ಗ್ರಾಮಸ್ಥರು ಇದೀಗ ಹುಲಿ ಧಾಳಿಯಿಂದ ಮತ್ತಷ್ಟು ಭಯದಲ್ಲಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲ್ದಾರೆ, ಬಾಡಗ ಬಾಣಂಗಾಲ, ಮೈಲಾತ್ ಪುರದ ಕಾಫಿ ತೋಟಗಳಲ್ಲಿ ಹುಲಿ ಪ್ರತ್ಯಕ್ಷಗೊಳ್ಳುತ್ತಿದ್ದು, ತೋಟ ಕಾರ್ಮಿಕರು ಕಾಫಿ ಕೊಯ್ಲು ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ತೆರಳಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಕಳೆದ ಕೆಲವು 5 ತಿಂಗಳುಗಳ ಹಿಂದೆ ಮೈಲಾತ್‍ಪುರ ಬಿ.ಬಿ.ಟಿ.ಸಿ ಸಂಸ್ಥೆಯ ಕಾಫಿ ತೋಟದಲ್ಲಿ ಹುಲಿಯ ಹೆಜ್ಜೆ ಕಾಣಿಸಿಕೊಂಡಿದ್ದು, ಬಳಿಕ ಕೆಲವು ತಿಂಗಳ ಬಳಿಕ ಕಾಫಿ ತೋಟದೊಳಗೆ ಮೇಯುತ್ತಿದ್ದ ಜಾನುವಾರಗಳ ಮೇಲೆ ಧಾಳಿ ನಡೆಸಿದ ನಂತರ ಮೃತಪಟ್ಟ ಜಾನುವಾರಗಳ ಅಸ್ತಿಪಂಜರ ದೊರಕಿತ್ತು. ಜಾನುವಾರುಗಳು ಹುಲಿಯ ಧಾಳಿಗೆ ಸಿಲುಕಿ ಸಾವನ್ನಪ್ಪಿದ್ದು, ಹುಲಿಯ ಚಲನವಲನ ಅರಿಯಲು ಅರಣ್ಯ ಇಲಾಖೆ ಮೈಲಾತ್‍ಪುರದ ಕಾಫಿ ತೋಟದಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿತ್ತು. 5 ಸಿ.ಸಿ ಕ್ಯಾಮೆರಾದಲ್ಲಿ ಹುಲಿ ನಡೆದಾಡುವ ದೃಶ್ಯ ಸೆರೆಯಾಗಿತ್ತು. ಅರಣ್ಯ ಇಲಾಖಾಧಿಕಾರಿಗಳು ಸಭೆ ನಡೆಸಿ, ಹುಲಿಯ ಸೆರೆಗೆ ಮೇಲಧಿಕಾರಿಗಳಿಂದ ಅನುಮತಿಯನ್ನು ಪಡೆದಿದ್ದು ಕಾಫಿ ತೋಟದಲ್ಲಿ ಬೋನು ಅಳವಡಿಸಲಾಗಿತ್ತು. ಬೋನಿನಲ್ಲಿ 2 ಆಡುಗಳನ್ನು ಕಟ್ಟಿ ಹಾಕಲಾಗಿತ್ತು. ಆದರೇ ಬೋನು ಅಳವಡಿಸಿದ ಬಳಿಕ ಹುಲಿಯು ಬೋನಿನತ್ತ ಸುಳಿಯದೇ, ಬಾಡಗ ಬಾಣಂಗಾಲ ತೋಟದಲ್ಲಿ ಪ್ರತ್ಯಕ್ಷಗೊಂಡಿತ್ತು. ಬಾಡಗ ಬಾಣಂಗಾಲ ಕಾಫಿ ತೋಟದಲ್ಲೂ ಎರಡು ಜಾನುವಾರುಗಳನ್ನು ಬಲಿ ಪಡೆದ ಹುಲಿ, ಇದೀಗ ಮಾಲ್ದಾರೆಯ ಜೋಸ್ ಕುರಿಯನ್ ಎಂಬವರ ಕಾಫಿ ತೋಟದಲ್ಲಿ ಮೇಯುತ್ತಿದ್ದ ಗ್ರಾ.ಪಂ. ಸದಸ್ಯೆ ಇಂದಿರಾ ಎಂಬವರಿಗೆ ಸೇರಿದ ಎರಡು ಜಾನುವಾರುಗಳನ್ನು ಸಾಯಿಸಿದೆ.

ಅರಣ್ಯ ಇಲಾಖಾಧಿಕಾರಿಗಳು ಹುಲಿಯ ಸೆರೆಗೆ ಮೃತಪಟ್ಟ ಜಾನುವಾರುಗಳ ಪೈಕಿ ಒಂದನ್ನು ಬೋನಿನ ಬಳಿಯೇ ಇರಿಸಿ, ಕಾರ್ಯಾಚರಣೆ ನಡೆಸಿದ್ದರೂ ಹುಲಿ ಸೆರೆಯಾಗಲಿಲ್ಲ. ಜೋಸ್ ಕುರಿಯನ್ ಎಂಬವರ ತೋಟದಲ್ಲಿ ಮರದಲ್ಲಿ 2 ಸಿ.ಸಿ ಕ್ಯಾಮೆರಾ ಅಳವಡಿಸಿದ್ದು, ಬೋನನ್ನು ಕೂಡ ಇಡಲಾಗಿದೆ.

ರಸ್ತೆ ಬದಿಯಲ್ಲಿ ಪ್ರತ್ಯಕ್ಷಗೊಂಡ ಹುಲಿರಾಯ..!!

ಇತ್ತೀಚೆಗೆ ಮಾಲ್ದಾರೆಯಿಂದ ಸಿದ್ದಾಪುರಕ್ಕೆ ಮಾಲ್ದಾರೆಯ ನಿವಾಸಿಗಳಾದ ಮಂಜು ಹಾಗೂ ಯತೀಶ್ ಯುವಕರಿಬ್ಬರು ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ಮೈಲಾತ್‍ಪುರದ ಸಮೀಪದ ಮುಖ್ಯ ರಸ್ತೆಯ ಬಳಿಯ ಆನೆ ಕಂದಕದ ಮೇಲ್ಬಾಗದ ಕಾಡಿನ ಒಳಗೆ ಅವಿತುಕೊಂಡು ಕುಳಿತಿದ್ದ ಹುಲಿಯು ಕಾಣಿಸಿಕೊಂಡಿದೆ.

ಕೂಡಲೇ ಯುವಕರು ತಮ್ಮ ಮೊಬೈಲ್‍ನಲ್ಲಿ ಚಿತ್ರ ಹಾಗೂ ವಿಡಿಯೋ ಸೆರೆ ಹಿಡಿದಿದ್ದು, ಹುಲಿಯ ವಿಡಿಯೋ ಜಿಲ್ಲಾಧ್ಯಂತ ವೈರಲ್ ಆಗಿದೆ. ದೃಶ್ಯವನ್ನು ಕಂಡ ಗ್ರಾಮಸ್ಥರು ಇದೀಗ ಮತ್ತಷ್ಟು ಭಯಭೀತರಾಗಿದ್ದು, ಜನವಸತಿ ಪ್ರದೇಶದಲ್ಲಿ ಸುತ್ತಾಡುತ್ತಿರುವ ಹುಲಿಯ ಹೆಜ್ಜೆಗಳ ಗುರುತುಗಳು ಕಂಡು ಬಂದಿದೆ.

ಈ ಬಗ್ಗೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಅವರು ಶಕ್ತಿಯೊಂದಿಗೆ ಮಾತನಾಡಿ, ಕಳೆದ ಕೆಲವು ತಿಂಗಳಿಂದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಸಿಬ್ಬಂದಿ ಹಾಗೂ ಆರ್.ಆರ್.ಟಿ ತಂಡ ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಹುಲಿಯನ್ನು ಸೆರೆಹಿಡಿಯಲು ಬೋನಿನ ಬಳಿಯಲ್ಲಿ ಇಟ್ಟಿದ್ದ ಜಾನುವಾರಿನ ಮೃತದೇಹ ತೆರವುಗೊಳಿಸಲಾಗಿದೆ. ಅರಣ್ಯ ಇಲಾಖೆಯ ವತಿಯಿಂದ ದಿನಂಪ್ರತಿ ಸಿಬ್ಬಂದಿಗಳು ಹಾಗೂ ಆರ್.ಆರ್.ಟಿ ತಂಡದವರು ಹುಲಿಯ ಚಲನ ವಲನಗಳನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರಮ ಪಡುತ್ತಿದ್ದಾರೆ. ಆದರು ಕೂಡ ಹುಲಿಯ ಸುಳಿವು ಸಿಗುತ್ತಿಲ್ಲ ಎಂದು ಮಾಹಿತಿ ನೀಡಿದರು.

-ವಾಸು