ಮಡಿಕೇರಿ, ಡಿ. 1: ಜಿಲ್ಲಾ ಕೇಂದ್ರ ಮಡಿಕೇರಿ ನಗರ ಠಾಣೆ ಹಾಗೂ ಮಹಿಳಾ ಠಾಣೆ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲ 19 ಠಾಣೆಗಳಲ್ಲಿ ಜನಸ್ನೇಹಿ ವ್ಯವಸ್ಥೆಯೊಂದಿಗೆ ಪೊಲೀಸ್ ಸ್ವಾಗತಕಾರರನ್ನು ನಿಯೋಜಿಸಲಾಗಿದೆ. ಪೊಲೀಸ್ ಉಪವಿಭಾಗಗಳಲ್ಲಿ ಆಯಾ ಠಾಣಾ ಸಿಬ್ಬಂದಿಗಳಿಗೆ ಸ್ವಾಗತಕಾರರ ಹೊಣೆಗಾರಿಕೆ ಕುರಿತು ಈಗಾಗಲೇ ಎರಡು ದಿನಗಳ ಕಾರ್ಯಾಗಾರ ದೊಂದಿಗೆ ತರಬೇತಿ ನೀಡಲಾಗಿದೆ.

ಪೊಲೀಸ್ ಕಚೇರಿ ಹಾಗೂ ಠಾಣೆಗಳ ಬಾಗಿಲುಗಳಲ್ಲಿ ಇದುವರೆಗೆ ಬಂದೂಕು ಸಹಿತ ರಕ್ಷಣಾ ಸಿಬ್ಬಂದಿ ನಿಯೋಜಿಸಲ್ಪಡುತ್ತಿದ್ದರೆ, ಪ್ರಸಕ್ತ ವ್ಯವಸ್ಥೆಯಲ್ಲಿ ಮೇಜು ಕುರ್ಚಿಯೊಂದಿಗೆ ಸ್ವಾಗತಕಾರರ ಫಲಕದೊಂದಿಗೆ ಅಲ್ಲೊಬ್ಬರು ತರಬೇತಿ ಗೊಂಡ ನಗುಮೊಗದ ಸಿಬ್ಬಂದಿ ನೊಂದು ಬರುವವರನ್ನು ಬರಮಾಡಿಕೊಳ್ಳಲಿದ್ದಾರೆ.

ಅಲ್ಲದೆ ಸ್ವಾಗತಕಾರರ ಬಳಿ ಇರುವ ದಾಖಲೆಯಲ್ಲಿ ನಿರ್ದಿಷ್ಟವಾಗಿ ಠಾಣೆಗೆ ಭೇಟಿ ನೀಡಿದವರ ಹೆಸರು, ಉದ್ದೇಶ, ಯಾರ ಭೇಟಿಯಾಗಬೇಕಿದೆ. ಭೇಟಿಯ ಕಾರಣ ಇತ್ಯಾದಿ ನಮೂದಿಸಿಕೊಂಡು ಆ ಬಗ್ಗೆ ಸಲಹೆಗಳನ್ನು ನೀಡಲಿದ್ದಾರೆ.

ಆ ಮೂಲಕ ಪೊಲೀಸ್ ಠಾಣೆಗಳಿಗೆ ಅನ್ಯಾಯ, ದೌರ್ಜನ್ಯ, ಹಿಂಸೆಗೆ ಒಳಗಾಗಿ ಬರುವವರಿಗೆ ಪ್ರವೇಶ ದ್ವಾರದಲ್ಲೆ ಸಂತೈಸಿ ಸಲಹೆಗಳನ್ನು ನೀಡುವಲ್ಲಿ ಈ ಸ್ವಾಗತಕಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.