ಸೋಮವಾರಪೇಟೆ, ನ. 30: ಜಿಲ್ಲೆಯಲ್ಲಿ ವಿಶೇಷಚೇತನ ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದು ಸರ್ಕಾರದ ಮೂಲಕವೇ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಜಿಲ್ಲಾ ಅಂಗವಿಕಲರು ಮತ್ತು ಅಬಲರ ಶ್ರೇಯೋಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಇಂದ್ರೇಶ್ ಕೊಡ್ಲಿಪೇಟೆ ಆಗ್ರಹಿಸಿದರು.

ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಿಶೇಷಚೇತನರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೊಡಗು ಜಿಲ್ಲೆಯಲ್ಲಿರುವ ವಿಶೇಷಚೇತನರ ಸಮಗ್ರ ಸರ್ವೇ ಆಗಬೇಕು. ಅವರುಗಳ ಶ್ರೇಯೋಭಿವೃದ್ಧಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಬೇಕು. ಸರ್ಕಾರೇತರ ಸಂಸ್ಥೆಗಳಿಗೆ ಬಿಡುಗಡೆ ಯಾಗುತ್ತಿರುವ ಹಣ ಮತ್ತು ಸರ್ಕಾರದಿಂದ ಇಲಾಖೆಗಳ ಮೂಲಕ ಬಿಡುಗಡೆಯಾಗುವ ಅನುದಾನ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಇಂದ್ರೇಶ್ ಇಲಾಖೆಯನ್ನು ಒತ್ತಾಯಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ, ವಿಶೇಷಚೇತನರೂ ಸಹ ಸಮಾಜದ ಅವಿಭಾಜ್ಯ ಅಂಗ ವಾಗಿದ್ದಾರೆ. ಇವರುಗಳ ಬಗ್ಗೆ ಮೂದಲಿಕೆ, ತಾತ್ಸಾರ ಮನೋಭಾವ ಇರಬಾರದು. ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯ ಎಂದರು.

ವಿಶೇಷಚೇತನರ ಸಂಘದ ತಾಲೂಕು ಅಧ್ಯಕ್ಷ ಸಂಗಮೇಶ್ ಮಾತನಾಡಿ, ಸರ್ಕಾರದ ವತಿಯಿಂದ ಇಲಾಖೆಗಳಿಗೆ ಲಭಿಸುವ ಸೌಲಭ್ಯಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಂಗವಿಕಲರಿಗೆ ಸರ್ಕಾರಿಂದ ದೊರಕುವ ಸೌಲಭ್ಯಗಳ ಪಟ್ಟಿಯನ್ನು ಕೇಳಿ ವರ್ಷಗಳೇ ಕಳೆದರೂ ಇಂದಿಗೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷಚೇತನರ ಗುರುತಿನ ಚೀಟಿ ಪಡೆಯಲು ವೈದ್ಯರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳೂ ಗಮನಹರಿಸುತ್ತಿಲ್ಲ. ಕ್ರೀಡಾಕೂಟ ನಡೆಸಿ 100 ರೂಪಾಯಿ ಬಹುಮಾನ ನೀಡಿದರೆ ಅದನ್ನು ಪಡೆಯಲು ಮಡಿಕೇರಿಗೆ 200 ರೂಪಾಯಿ ಖರ್ಚು ಮಾಡಿಕೊಂಡು ತೆರಳಬೇಕಿದೆ. ಯಾವ್ಯಾವದೋ ಜಯಂತಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಸರ್ಕಾರ ವಿಶೇಷಚೇತನರ ಶ್ರೇಯೋಭಿವೃದ್ಧಿಯತ್ತ ಗಮಹರಿಸದೇ ಇರುವದು ಸರಿಯಲ್ಲ ಎಂದರು.

ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ವಿಶೇಷಚೇತನರಿಗೆ ಎಲ್ಲಾ ಕ್ಷೇತ್ರದಲ್ಲೂ ಮೀಸಲಾತಿ ಕಲ್ಪಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‍ವೈಸರ್ ಶೈಲಾ, ವಿಆರ್‍ಡಬ್ಲ್ಯೂ ತಾಲೂಕು ಕಾರ್ಯಕರ್ತ ಹರೀಶ್ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿಶೇಷಚೇತನರಿಗೆ ವೇಗದ ನಡಿಗೆ, ಮಡಿಕೆ ಒಡೆಯುವದು, ಬಕೆಟ್‍ಗೆ ಬಾಲ್ ಎಸೆಯುವದು, ಸಂಗೀತ ಕುರ್ಚಿ, ಪಾಸಿಂಗ್ ದ ಬಾಲ್, ಥ್ರೋಯಿಂಗ್ ದ ಬಾಲ್, ಬಾಂಬ್ ಇನ್ ದ ಸಿಟಿ, ಜನಪದ ಗೀತೆ, ಏಕಪಾತ್ರಾಭಿನಯ, ಕಥೆ ಹೇಳುವದು, ಲೆಮನ್ ಅಂಡ್ ಸ್ಪೂನ್ ಸೇರಿದಂತೆ ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಶಿಕ್ಷಕರಾದ ನಾಗೇಶ್ ಮತ್ತು ವೀರಭದ್ರಪ್ಪ ನಡೆಸಿಕೊಟ್ಟರು.