ಸುಂಟಿಕೊಪ್ಪ, ನ. 30: ಮೂಲಭೂತ ಸೌಕರ್ಯಗಳ ಅನುಷ್ಠಾನದಲ್ಲಿ ಹಿನ್ನಡೆ ಹವಾಮಾನ ವೈಪರೀತ್ಯದಿಂದ ಕೈಕೊಡುತ್ತಿರುವ ಕೃಷಿಫಸಲು ಕಾಡು ಪ್ರಾಣಿಗಳ ಹಾವಳಿಯಿಂದ ಗರ್ವಾಲೆ ವಿಭಾಗದ ಗ್ರಾಮಸ್ಥರ ಬದುಕು ಶೋಚನೀಯವಾಗಿದೆ.

ಗರ್ವಾಲೆ ಗ್ರಾಮ ಪಂಚಾಯಿತಿಯಲ್ಲಿ 7 ಗ್ರಾ.ಪಂ.ಸದಸ್ಯರುಗಳಿದ್ದು ಜನಸಂಖ್ಯೆ ಕಡಿಮೆ ಆಧರಿಸಿ ಕಳೆದ ಬಾರಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸದಸ್ಯರ ಸಂಖ್ಯೆ 5ಕ್ಕೆ ಇಳಿದಿದೆ.

ಒಂದು ಕಾಲದಲ್ಲಿ ಏಲಕ್ಕಿ ಬೆಳೆಗೆ ಪುಷ್ಪಗಿರಿ ಬೆಟ್ಟತಪ್ಪಲಿನ ಈ ಗ್ರಾಮ ಹೆಸರುವಾಸಿಯಾಗಿತ್ತು ಏಲಕ್ಕಿ ಬೆಳೆಯಿಂದ ಇಲ್ಲಿನ ಜನತೆಯ ಆರ್ಥಿಕ ಮಟ್ಟ ಸುಧಾರಿಸಿತ್ತು. ಕ್ರಮೇಣ ಏಲಕ್ಕಿಗೆ ಕಟ್ಟೆರೋಗ ಅಪ್ಪಳಿಸಿರುವದರಿಂದ ಏಲಕ್ಕಿ ವ್ಯವಸಾಯ ನೆಲಕಚ್ಚಿತು. ಕಾಫಿ ತೋಟ ರೂಢಿಸಿಕೊಳ್ಳಲು ಮುಂದಾದರು. ವಾರ್ಷಿಕ ಸರಾಸರಿ 300 ಇಂಚು ಮಳೆಯಿಂದ ಕಾಫಿ ಬೆಳೆಯೂ ಕೈಗೆಟುಕದಂತಾಯಿತು. ಕರಿಮೆಣಸು ಸಹ ಈ ವಿಭಾಗದ ಮಣ್ಣಿಗೆ ಸರಿಹೊಂದುತ್ತಿಲ್ಲ ಈಗ ಹೆಚ್ಚಾಗಿ ಕಾಫಿ ಬೆಳೆಗೆ ಬೆಳೆಗಾರರು ಹೊಂದಿಕೊಂಡು ಜೀವನ ಸಾಗಿಸುತ್ತಿದ್ದಾರೆ.

ಬೆಳಕು ಕಾಣದ ಕುಗ್ರಾಮ: ಹಿಂದಿನ ಯುಪಿಎ ಸರಕಾರ ಪ್ರತಿ ಮನೆಗೂ ಬೆಳಕು ನೀಡಬೇಕೆಂಬ ಮಹಾತ್ವಾಕಾಂಕ್ಷೆ ಯೋಜನೆಯ ರಾಜೀವ್ ಗಾಂಧಿ ವಿದ್ಯುದ್ಧೀಕರಣ ಯೋಜನೆ ಜಾರಿಗೆ ತಂದಿತು ಆದರೆ ಈ ಯೋಜನೆಯ ಅನುಷ್ಠಾನ ಅರ್ಧದಲ್ಲೇ ನಿಂತಿದ್ದು ಸೂರ್ಲಬ್ಬಿ, ಗರ್ವಾಲೆ, ಕುಂಬಾರಗಡಿಕೆ, ಕಿಕ್ಕರಳ್ಳಿ ಗ್ರಾಮದ ಹಲವಾರು ಮನೆಗಳಿಗೆ ವಿದ್ಯುತ್ ಸೌಲಭ್ಯ ಇನ್ನೂ ಮರಿಚಿಕೆಯಾಗಿದೆ.

ಕುಗ್ರಾಮವಾದ ಹಲವಾರು ರಸ್ತೆಗಳು ಹಾಳಾಗಿದ್ದು ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರು ನಡೆದಾಡಲು ಅಸಾಧ್ಯವಾಗಿದೆ. ಕುಡಿಯುವ ನೀರು ನೈಸರ್ಗಿಕವಾಗಿ ಲಭಿಸುತ್ತಿದ್ದು ಆದರ ಪ್ರಯೋಜನ ಗ್ರಾಮಸ್ಥರು ಪಡೆಯುತ್ತಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಆದಾಯ ಕಡಿಮೆಯಿದ್ದು ಸರಕಾರದ ಅಲ್ಪಮೊತ್ತದ ಅನುದಾನದಲ್ಲಿ ಅಭಿವೃದ್ಧಿಯಲ್ಲಿ ಕಾರ್ಯ ನಡೆಸದಂತಾಗಿದೆ.

ವಿದ್ಯಾಭ್ಯಾಸ ಪಡೆದ ನಂತರ ಯುವಕ ಯುವತಿಯರು ಕೆಲಸ ಅರಸಿಕೊಂಡು ಮೈಸೂರು, ಬೆಂಗಳೂರು ಹಾಗೂ ಅಂತರ್ ರಾಜ್ಯಗಳಲ್ಲಿ ಮೊದಲಾದೆಡೆಗೆ ತೆರಳಿ ಅಲ್ಲೇ ಉದ್ಯೋಗದಲ್ಲಿರುವದರಿಂದ ಮನೆಯ ಹಿರಿಯರು ತೋಟ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕೊಡವರ ಜಾನಪದ ಸಾಂಸ್ಕøತಿಕ ನೃತ್ಯ ಬೊಳಕಾಟ್, ಕೋಲಾಟ್, ಬಾಳುಪಾಟ್ ಈ ಗ್ರಾಮದ ಜನತೆ ಇನ್ನೂ ಉಸಿರಾಗಿಸಿಕೊಂಡು ಅದನ್ನು ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿ ಬೆಳೆಸಿಕೊಳ್ಳುತ್ತಿರುವದು ಕಾಣಬಹುದಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಗ್ರಾಮದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಆಸಕ್ತಿ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.