ಮಡಿಕೇರಿ, ನ. 30: ನಮ್ಮ ಸಾಧನೆಗೆ ಬಡತನದ ಹಿಂಜರಿಕೆ ಅಡ್ಡಿಯಾಗಬಾರದು ಎಂದು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕಲ್ಮಾಡಂಡ ಸರಸ್ವತಿ ಅವರು ಅಭಿಪ್ರಾಯಪಟ್ಟರು.
ಅಲ್ಲಾರಂಡ ರಂಗಚಾವಡಿ ಹಾಗೂ ಜನರಲ್ ತಿಮ್ಮಯ್ಯ ಶಾಲೆಯ ಆಶ್ರಯದಲ್ಲಿ ನಡೆದ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಸೂಕ್ತ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕಿದೆ. ಕೆಲವರು ಬಡತನದ ಹಿಂಜರಿಕೆಯಿಂದ ದೂರ ಸರಿಯುತ್ತಾರೆ. ಇದರಿಂದ ಅವರಲ್ಲಿ ರುವ ಪ್ರತಿಭೆ ಹೊರಬರುವದಿಲ್ಲ. ಆದರೆ, ಬಡತನ ನಮ್ಮ ಸಾಧನೆಗೆ ಅಡ್ಡಿಯಾಗಬಾರದು. ಹಿಂಜರಿಕೆಯನ್ನು ಬಿಟ್ಟು ಮುನ್ನುಗ್ಗಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್‍ನ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಪ್ಪಚ್ಚ ಕವಿ ಅದ್ಭುತವಾದ ಸಾಹಿತ್ಯವನ್ನು ರಚಿಸಿದ್ದಾರೆ. ನಾಟಕದಲ್ಲಿ ಸಾಕಷ್ಟು ವಿಷಯಗಳನ್ನು ಉತ್ತಮ ಶೈಲಿಯಲ್ಲಿ ನೀಡಿದ್ದಾರೆ. ಅದರಲ್ಲಿಯೂ ಬೈಗಳುಗಳನ್ನು ಅವರು ಬಳಸಿರುವ ರೀತಿ ವಿಶೇಷವಾಗಿದೆ. ಅವರ ಸಾಹಿತ್ಯ ಹಲವರಿಗೆ ಪ್ರೇರಣೆಯಾಗಿ ಸಾಹಿತ್ಯ ಚಟುವಟಕೆಯಲ್ಲಿ ತೊಡಗುವಂತಾಗಲಿ ಎಂದು ಹೇಳಿದರು.
ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಅಪ್ಪಚ್ಚ ಕವಿಯಿಂದ ವಿದ್ಯಾರ್ಥಿಗಳು ಕಲಿಯುವಂತಹದ್ದು ಸಾಕಷ್ಟಿದೆ. ಪ್ರತಿಕೂಲ ವಾತಾವರಣದಲ್ಲಿ, ಸಾಹಿತ್ಯದ ಗಂಧ ಗಾಳಿ ಇಲ್ಲದ ಕಾಲದಲ್ಲಿ ಅದ್ಭುತವಾದ ಸಾಹಿತ್ಯ ರಚಿಸಿದವರು ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ. ಮನೆಗೆ ಬೆಂಕಿ ಬಿದ್ದು ಎಲ್ಲಾ ಸಂಪಾದನೆಯನ್ನು ಕಳೆದು ಕೊಂಡು ಬಡತನಕ್ಕೆ ಬಿದ್ದಾಗ ಎದೆಗುಂದದೆ, ಹರಿಕಥೆ ಮಾಡಿ ಬದುಕು ಕಟ್ಟಿಕೊಂಡರು. ಎಂತಹ ಸಂದರ್ಭದಲ್ಲಿಯೂ ಸ್ಥೈರ್ಯ ಕಳೆದುಕೊಳ್ಳದೆ ಬದುಕಲು ಅಪ್ಪಚ್ಚಕವಿ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ, ಅಲ್ಲಾರಂಡ ವಿಠಲ ನಂಜಪ್ಪ ಅವರು ಅಪ್ಪಚ್ಚ ಕವಿಯ ಕುರಿತು ಸಾಕ್ಷ್ಯ ಚಿತ್ರ ರಚಿಸಿ ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಗಳು ಹೆಚ್ಚಾಗಿ ನಡೆದರೆ ವಿದ್ಯಾರ್ಥಿ ಗಳಲ್ಲಿಯೂ ಸಾಹಿತ್ಯಾಭಿರುಚಿ ಬೆಳೆಯುತ್ತದೆ ಎಂದು ಹೇಳಿದರು.
ಸಾಕ್ಷ್ಯಚಿತ್ರ ನಿರ್ಮಿಸಿದ ಅಲ್ಲಾರಂಡ ವಿಠಲ ನಂಜಪ್ಪ ಅವರು ಮಾಹಿತಿ ನೀಡಿದರು. ಅಲ್ಲದೆ, ಸಾಕ್ಷ್ಯ ಚಿತ್ರಕ್ಕೆ ನೆರವು ನೀಡಿದವರನ್ನು ನೆನಪು ಮಾಡಿಕೊಂಡರು. ರಂಗಕರ್ಮಿ ಮಾದೇಟಿರ ಬೆಳ್ಯಪ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಅಪ್ಪಚ್ಚ ಕವಿಯ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎ. ಷಂಶುದ್ದೀನ್, ಮುನೀರ್ ಅಹ್ಮದ್, ಬೊಪ್ಪಂಡ ಶ್ಯಾಮ್, ಹೆಚ್.ಜಿ. ಬಾಲಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಾಕ್ಷ್ಯಚಿತ್ರದ ಪ್ರದರ್ಶನ ನೀಡಲಾಯಿತು.