ವೀರಾಜಪೇಟೆ, ನ. 30: ನಗರ ಪೊಲೀಸ್ ಠಾಣೆಗಳ ಸಮುಚ್ಚಯದ ಅವರಣದಿಂದ ಅನತಿ ದೂರದಲ್ಲಿರುವ ಅಂಗಡಿ ಮತ್ತು ಹೊಟೇಲ್ ಒಂದರಲ್ಲಿ ಬೆಳ್ಳಂಬೆಳಿಗ್ಗೆ ಕಳ್ಳತನ ನಡೆದಿರುವ ಘಟನೆ ನಗರದ ಮೀನುಪೇಟೆಯಲ್ಲಿ ನಡೆದಿದೆ.ವೀರಾಜಪೇಟೆ ನಗರದ ಮಲಬಾರ್ ರಸ್ತೆ ಮೀನುಪೇಟೆಯ ಮಸೀದಿ ಸನಿಹದಲ್ಲಿ ಎ.ಪಿ. ಇಬ್ರಾಹಿಂ ಸ್ಟೋರ್ ದಿನಸಿ ಅಂಗಡಿ ಮಳಿಗೆ ಮತ್ತು ಹೊಟೇಲ್ ಹೊಂದಿಕೊಂಡಿದ್ದು ಅಪರಿಚಿತರು ಇಂದು ರಾತ್ರಿ 2.21ರ ಸಮಯದಲ್ಲಿ ಅಂಗಡಿಯ ಬೀಗ ಒಡೆದು ಹಣದ ಪೆಟ್ಟಿಗೆಯಲ್ಲಿದ್ದ 20,000 ರೂ ನಗದು ಮತ್ತು ಮೊಬೈಲ್ ಕರೆನ್ಸಿ ಹಾಕಲು ಉಪಯೊಗಿಸುತ್ತಿದ್ದ 4 ಮೊಬೈಲ್‍ಗಳು, ಮೊಬೈಲ್‍ನಲ್ಲಿದ್ದ 5000 ಕರೆನ್ಸಿ ಹಣದೊಂದಿಗೆ ಕಳ್ಳತನ ವೆಸಗಿದ್ದಾರೆ. ಅಂಗಡಿಗೆ ಕನ್ನ ಹಾಕಿದ ನಂತರ ಹೊಟೇಲ್ ಬೀಗ ಮುರಿದು ಕಬ್ಬಿಣದ ಬಾಗಿಲನ್ನು ತೆರೆದು ಹೊಟೇಲ್‍ನಲ್ಲಿದ್ದ ಎರಡು ಭಂಡಾರ ಪೆಟ್ಟಿಗೆಯಲ್ಲಿದ್ದ ಹಣ ಮತ್ತು ಹೊಟೇಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕನ ಅಟೋ (ಕೆಎ-12-9670) ಸಂಖ್ಯೆಯ ದಾಖಲೆ ಪತ್ರಗಳನ್ನು ಕಳ್ಳತನ ಮಾಡಿದ್ದಾರೆ.

ಅಂಗಡಿ ಮತ್ತು ಹೊಟೇಲ್‍ನ ಮಾಲೀಕ ಸಿ.ವಿ. ಮೊಹಮ್ಮದ್ ಅವರು ಅಂಗಡಿಯನ್ನು ತನ್ನ ಸಹಾಯಕ ಸುಬೇರ್ ಎಂಬವನಿಗೆ ನಿರ್ವಹಿಸಲು ಹೇಳಿ ಕೇರಳಕ್ಕೆ ತೆರಳಿದ್ದರು ಎನ್ನಲಾಗಿದೆ. ಸುಬೇರ್ ಇಂದು ಮುಂಜಾನೆ 5.15 ಗಂಟೆಗೆ ಮಸೀದಿಗೆ ಪ್ರಾರ್ಥನೆಗಾಗಿ ತೆರಳಿದ್ದ ಸಂದರ್ಭದಲ್ಲಿ ಹೊಟೇಲ್ ಮತ್ತು ಅಂಗಡಿಯ ಬಾಗಿಲು ಮುರಿದಿರುವದು ಗೊಚರಿಸಿದೆ. ತಕ್ಷಣವೇ ಅಂಗಡಿಯ ಮಾಲೀಕರಿಗೆ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಅಗಮಿಸಿ ಅಂಗಡಿಯಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರದಲ್ಲಿ ನಮೂದಿಸಲಾಗಿದ್ದ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಅಂಗಡಿ ಮಾಲೀಕರು ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಅರೋಪಿಗಳ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.