ಶ್ರೀಮಂಗಲ, ನ. 30: ಟಿ.ಶೆಟ್ಟಿಗೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಲಕ್ಷ್ಮಣ ತೀರ್ಥ ನದಿ ಹರಿದು ಹೋಗುವ ನಾಲೆ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದನ್ನು ಹೈಕೋರ್ಟ್ ಆದೇಶದನ್ವಯ ತೆರವು ಮಾಡುವ ಆದೇಶದ ಹಿನ್ನೆಲೆಯಲ್ಲಿ ತಾ. 1ರಂದು (ಇಂದು) ಸರ್ವೆ ಕಾರ್ಯವು ತಾಲೂಕು ಆಡಳಿತದಿಂದ ನಡೆಯಲಿದೆ.
ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ನಾಲೆ ತೆರವಿಗೆ ಸಂಬಂಧಿಸಿದಂತೆ ಸರ್ವೆ ನಡೆಸಲು ತಾಲೂಕು ಆಡಳಿತ ನಿರ್ಧರಿಸಿದ್ದು ಹೈಕೋರ್ಟ್ ಆದೇಶದನ್ವಯ ಈ ಹಿಂದೆ ಸರ್ವೆ ಕೈಗೊಂಡಿದ್ದ ಜಿಲ್ಲಾಡಳಿತ 8 ಮಂದಿ ಒತ್ತುವರಿ ಮಾಡಿಕೊಂಡಿರುವದನ್ನು ದೃಢಪಡಿಸಿತ್ತು.
ನಾಲೆ ಒತ್ತುವರಿಯಿಂದ ನೀರು ಹರಿಯುವಿಕೆಗೆ ತಡೆಯಾಗಿದ್ದು ಸ್ಥಳೀಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಟಿ.ಶೆಟ್ಟಿಗೇರಿಯ ಪುಗ್ಗೇರ ರೇವತಿ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.
8 ಮಂದಿ ಒತ್ತುವರಿದಾರರು ಒತ್ತುವರಿ ಮಾಡಿಕೊಂಡಿರುವ ಪ್ರಮಾಣ ಮತ್ತು ವಿವರವಾದ ವರದಿಯನ್ನು ಹೈಕೋರ್ಟ್‍ಗೆ ಜಿಲ್ಲಾಡಳಿತ ಸಲ್ಲಿಸಿತು. ಈ ಪ್ರಕ್ರಿಯೆ ನಡೆದು ನಾಲ್ಕು ವರ್ಷ ಕಳೆದಿದ್ದರೂ ನಾಲೆ ಒತ್ತುವರಿ ಮಾಡಿಕೊಂಡವರ ಜಾಗವನ್ನು ತೆರವುಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮುಂದಾಗಲಿಲ್ಲ. ಇದೀಗ ಅರ್ಜಿದಾರರಾದ ಪುಗ್ಗೇರ ರೇವತಿ ಅವರ ಮನವಿಗೆ ಸ್ಪಂಧಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಕಾನೂನಿನನ್ವಯ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರಿಗೆ ಸೂಚನೆ ನೀಡಿದ್ದಾರೆ.
ಶ್ರೀಮಂಗಲದಲ್ಲಿ ಒತ್ತುವರಿದಾರರು ಹಾಗೂ ಅರ್ಜಿದಾರರ ನಡುವೆ ಸಂದಾನ ಸಭೆ ನಡೆಸಿದ ತಹಶೀಲ್ದಾರ್ ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳಿಸುವ ಪ್ರಯತ್ನ ನಡೆಸಿದ್ದರು. ಹೈಕೋರ್ಟ್ ಅದೇಶದನ್ವಯ ನಾಲೆ ಒತ್ತುವರಿ ತೆರವುಗೊಳಿಸಬೇಕೆಂದು ಅರ್ಜಿದಾರರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಹೊಸದಾಗಿ ಸರ್ವೆ ನಡೆಸಲು ತಹಶೀಲ್ದಾರ್ ನಿರ್ಧರಿಸಿದ್ದಾರೆ.
ತಹಶೀಲ್ದಾರ್ ನೀಡಿದ ಸೂಚನೆಯನ್ವಯ ಹೊಸದಾಗಿ ಸರ್ವೆ ನಡೆಸಲು ಸರ್ವೆ ವಿಭಾಗಗಳು ನಿರ್ಧರಿಸಿದೆ. 15 ದಿನಗಳೊಳಗೆ ಒತ್ತುವರಿ ತೆರವುಗೊಳಿಸುವಂತೆ ವೀರಾಜಪೇಟೆ ತಹಶೀಲ್ದಾರ್ 8-7-2017ರಂದು ಜಾರಿ ಮಾಡಿದ್ದ ನೋಟಿಸ್‍ಗೆ ತಡೆಯಾಜ್ಞೆ ನೀಡುವಂತೆ ಕೋರಿ ಕಾಳಿ ಸವೀರ್ಸ್ ಸ್ಟೇಷನ್ ಮಾಲೀಕ ಎಂ.ಎಂ.ಡಾಲಿ ಚಂಗಪ್ಪ ವೀರಾಜಪೇಟೆ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
30.6.2014 ರಂದು ನಡೆಸಿದ ಸರ್ವೆಗೆ ಆಕ್ಷೇಪ ವ್ಯಕ್ತಪಡಿಸಿದ್ದು ಈ ಪ್ರಕರಣ ಹೈಕೋರ್ಟ್‍ನಲ್ಲಿ ಇತ್ಯಾರ್ಥವಾಗಲು ಬಾಕಿ ಇದೆ. ಹಳೆಯ ಸರ್ವೆಯನ್ವಯ ಒತ್ತುವರಿ ತೆರವುಗೊಳಿಸಿದ್ದಲ್ಲಿ ಪೆಟ್ರೋಲ್ ಬಂಕ್‍ಗೆ ಹಾನಿಯಾಗಲಿದೆ. 1994ರಲ್ಲಿ ಮಂದಮಾಡ ರಾಜಪ್ಪರವರಿಂದ ಕೃಷಿ ಭೂಮಿ ಖರೀದಿಸಿದ್ದು 2003ರಲ್ಲಿ ಕೃಷಿಯೇತರ ಚಟುವಟಿಕೆಗೆ ಭೂ ಪರಿವರ್ತನೆ ಮಾಡಲಾಗಿದೆ. ಟಿ.ಶೆಟ್ಟಿಗೇರಿ ಗ್ರಾ.ಪಂ ಭೂಪರಿವರ್ತನೆಗೆ ನಿರಾಕ್ಷೇಪಣೆ ಪತ್ರ ನೀಡಿದೆ.
ಇದಕ್ಕಾಗಿ ಒತ್ತುವರಿ ತೆರವು ಪ್ರಕ್ರಿಯೆ ನೋಟಿಸ್ ಜಾರಿ ಮಾಡುವಂತೆ ಕೋರಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ, ಬಿಸಿ, ಸಿಓ, ತಹಶೀಲ್ದಾರ್, ಟಿ.ಶೆಟ್ಟಿಗೇರಿ ಗ್ರಾ.ಪಂ ಪಿಡಿಓ, ಶ್ರೀಮಂಗಲ ಆರ್‍ಐ, ಅರ್ಜಿದಾರರಾದ ರೇವತಿ, ಎಂ.ಪಿ.ಕುಂಞಪ್ಪ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.