ಶ್ರೀಮಂಗಲ, ನ. 30: ಯುಕೊ ಸಂಘಟನೆಯ ವಾರ್ಷಿಕ ಹಬ್ಬವಾದ “ಯುಕೊ ಕೊಡವ ಮಂದ್ ನಮ್ಮೆ”ಯ ನಾಲ್ಕನೇ ವರ್ಷದ ಆಚರಣೆ ಡಿ.24 ಹಾಗೂ 25 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.
ಯುಕೊ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋಣಿಕೊಪ್ಪ ಕೊಡವ ಸಮಾಜದಲ್ಲಿ ಯುಕೊ ಸಂಘಟನೆಯ ಮನವಿಯ ಮೇರೆಗೆ ಹೊಸ ಮಂದ್ ಪ್ರಾರಂಭವಾಗಲಿದ್ದು, ಇದಕ್ಕೆ ‘ಪುದಿಯವಾಡೆ ಮಂದ್’ ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಮಂದ್‍ನ ಆಶೀರ್ವಾದದೊಂದಿಗೆ ಈ ಸಾಲಿನ ‘ಯುಕೊ ಕೊಡವ ಮಂದ್ ನಮ್ಮೆ’ ನಡೆಯಲಿದೆ. ತಾ.24 ರಂದು ಇದೇ ಪ್ರಥಮ ಬಾರಿಗೆ ಎರಡು ದಿನಗಳ ಮಂದ್ ನಮ್ಮೆಗೆ ಚಾಲನೆ ದೊರೆಯಲಿದ್ದು, ಮೊದಲ ದಿನ ಸಾಂಪ್ರದಾಯಿಕ ಮಂದ್‍ನ ಚಟುವಟಿಕೆಗಳಾದ ತೆಂಗೆ ಬೊಡಿ, ತೆಂಗೆ ಕನಿ, ಬಾಳೋಪಾಟ್, ಮಕ್ಕಳ ಕಪ್ಪೆಯಾಟ್ ಹಾಗೂ ವಾಲಗತಾಟ್ ಪೈಪೋಟಿ ನಡೆಯಲಿದೆ. ಹಾಗೆಯೇ ಮಂದ್‍ನಲ್ಲಿ ನಡೆಯುವ ಮೇದನೂ ಮೇದಿಯು, ನಾಡೆಕಾಕೊ, ಹಾಗೂ ಪುತ್ತರಿ ಮನೆಪಾಟ್ ಪ್ರದರ್ಶನವಿರುತ್ತದೆ.
ತಾ.25 ರಂದು ಗೋಣಿಕೊಪ್ಪಲಿನ ಎಪಿಎಂಸಿಯಿಂದ ಭವ್ಯ ಸಾಂಸ್ಕøತಿಕ ಮೆರವಣಿಗೆಯ ಮೂಲಕ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಮೈದಾನಕ್ಕೆ ತೆರಳಿ ಅಲ್ಲಿ ಬೃಹತ್ ಸಮಾವೇಶ ನಡೆಯಲಿದು,್ದ ಕೊಡಗಿನ ಮೂಲೆ ಮೂಲೆಗಳಿಂದ ಸಾಂಪ್ರದಾಯಿಕ ಉಡುಗೆಯಲ್ಲಿ ಆಬಾಲವೃದ್ಧರಾದಿಯಾಗಿ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕೊಡವ ಮಂದ್ ನಮ್ಮೆ ಆಚರಣೆಯ ಹಿಂದೆ ಕೊಡವ ಸಂಸ್ಕøತಿಯನ್ನು ಉಳಿಸಿ ಪೋಷಿಸುವ ಉದ್ದೇಶವಿದೆ. ಕೊಡವ ಸಂಸ್ಕøತಿಯಲ್ಲಿನ ವೈವಿದ್ಯತೆಯನ್ನು ಕೊಡವರ ಮಧ್ಯೆ ಹಂಚಿಕೊಳ್ಳುವ ಹಾಗೂ ಯುವ ಪೀಳಿಗೆಗೆ ಕೊಡವ ಸಂಸ್ಕøತಿಯನ್ನು ಪರಿಚಯಿಸಿ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ಅಡಗಿದೆ. ಈ ಮಂದ್ ನಮ್ಮೆಯು ಮುಂದೊಂದು ದಿನ ಪ್ರಪಂಚಾದಾದ್ಯಂತ ಇರುವ ವಿವಿಧ ಸಾಂಸ್ಕøತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಮಾದರಿಯಾಗಲಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಶಕಗಳಿಂದ ಮುಚ್ಚಿ ಹೋಗಿದ್ದ ಅನೇಕ ಮಂದ್‍ಗಳು ಸ್ವಯಂಪ್ರೇರಿತವಾಗಿ ಮರುಜೀವ ಪಡೆದುಕೊಂಡು ಮಂದ್ ನಮ್ಮೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರುತ್ತಿರುವದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
35ಕ್ಕೂ ಹೆಚ್ಚಿನ ಮಂದ್‍ಗಳು ಭಾಗವಹಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಎಲ್ಲಾ ಮಂದ್‍ಗಳಿಗೆ ವಿಶೇಷವಾಗಿ ‘ಮಂದ್ ಮರ್ಯಾದಿ’ ಹಾಗೂ ಈ ವರ್ಷ ವಿಶೇಷವಾಗಿ ಕೊಡಗಿನ ಎಲ್ಲಾ ಸಾಂಪ್ರದಾಯಿಕ ಮಂದ್‍ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಾಗವಹಿಸುವ ಎಲ್ಲಾ ಮಂದ್‍ಗಳಿಗೆ ಪ್ರೋತ್ಸಾಹ ಬಹುಮಾನವಾಗಿ ‘ಮಂದ್ ಪಣ’ ಹಾಗೂ ಪಾರಿತೋಷಕಗಳನ್ನು ನೀಡಿ ಗೌರವಿಸಲಾಗುವದು.
ಕೊಡವ ಮಂದ್ ನಮ್ಮೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ವರ್ಷವೂ ಸಹ ಆಕರ್ಷಕ ಕೊಡವ ಸಾಂಪ್ರದಾಯಿಕ ಆಭರಣಗಳ ವಿಶೇಷ ‘ಮೊದ ಜೊಪ್ಪೆ’ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಜೋಮಾಲೆ, ಕೊಕ್ಕೆತಾತಿ, ಪೀಚೆಕತ್ತಿ, ಅರ್ದ ಪವನ್ ಹಾಗೂ ಕಾಲು ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಗುವದು ಎಂದು ಮಾಹಿತಿ ನೀಡಿದರು.
ಸಾಂಸ್ಕøತಿಕ ಪೈಪೋಟಿಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ಹೊರಹೊಮ್ಮುವ ತಂಡಕ್ಕೆ 25000 ನಗದು ಹಾಗೂ ಟ್ರೋಫಿಯನ್ನೊಳಗೊಂಡ ‘ಗಟ್ಟಿ ಮಂದ್’ ಪ್ರಶಸ್ತಿಯನ್ನು ನೀಡಲಾಗುವದು ಹಾಗೂ ಉಳಿದಂತೆ ಕೋಲಾಟ್, ಬೊಳಕಾಟ್, ಉಮ್ಮತಾಟ್ ಪೈಪೋಟಿಗಳಿಗೆ 4000, 3000, 2000 ರೂಪಾಯಿಗಳ ಮೂರು ಬಹುಮಾನಗಳು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವದು. ಪರೆಯಕಳಿ ಪೈಪೋಟಿಗೆ 2000, 1500, 1000, ರೂಪಾಯಿಗಳ ನಗದು ಹಾಗು ಟ್ರೋಫಿ, ವಾಲಗತಾಟ್‍ಗೆ ಪುರುಷರು, ಮಹಿಳೆಯರು ಹಾಗು ಮಕ್ಕಳಿಗೆ ಎರಡು ವಿಭಾಗಗಳು ಸೇರಿದಂತೆ 4 ವಿಭಾಗಗಳಿಗೆ 750, 500, 250 ರೂಪಾಯಿಗಳ ನಗದು ಬಹುಮಾನ ನೀಡಲಾಗುವದು. ಉಳಿದಂತೆ ಹಲವು ಪ್ರೋತ್ಸಾಹಕರ ಬಹುಮಾನಗಳನ್ನು ಸೇರಿಸಿ ಸುಮಾರು 4 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನವನ್ನು ನೀಡಲಾಗುವದು.
ವಿಶೇಷ ಆಕರ್ಷಣೆಯಾದ ಪುರುಷರಿಗೆ ‘ಕೊಂಬಮೀಸೆರ ಬಂಬೊ’ ಹಾಗೂ ಮಹಿಳೆಯರಿಗೆ ‘ಬೋಜಿ ಜಡೆರ ಬೋಜಕ್ಕ’ ಎಂಬ ಸ್ಪರ್ಧೆ ಈ ವರ್ಷವೂ ಮುಂದುವರಿಯಲಿದ್ದು, ಕೊಡವ ಸಂಸ್ಕøತಿಗೆ ಭೂಷಣವಾಗಿದ್ದ ಮೀಸೆ ಹಾಗೂ ಜಡೆ ಸಂಸ್ಕøತಿಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಯುವ ಜನಾಂಗ ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ತಾ. 25 ರಂದು ನಡೆಯಲಿರುವ ಸಾಂಸ್ಕøತಿಕ ಮೆರವಣಿಗೆಯಲ್ಲಿ ಸಹಸ್ರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಲು ಗ್ರಾಮಸ್ಥರ ಸಹಕಾರದೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಮಾದೇಟಿರ ತಿಮ್ಮಯ್ಯ, ಹಾಜರಿದ್ದರು.