ಶ್ರೀಮಂಗಲ, ನ. 30: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ, ಪೊನ್ನಂಪೇಟೆಯ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹ 30 ದಿನ ಪೂರೈಸಿದ್ದು, ಗುರುವಾರದ ಸತ್ಯಾಗ್ರಹದಲ್ಲಿ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್, ಪೊನ್ನಂಪೇಟೆಯ ಗಣಪತಿ ನಗರದ ಕಾವೇರಿ ಕೊಡವ ಕೂಟ ಹಾಗೂ ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಪೂಕಳ ಶ್ರೀ ದಾರಾ ಮಹಾದೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ಬೆಂಬಲ ವ್ಯಕ್ತಡಿಸಿದರು.

ಈ ಸಂದರ್ಭ ಮಾತನಾಡಿದ ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ ಅವರು ತಾಲ್ಲೂಕು ರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಯೊಬ್ಬರು ಈ ಹೋರಾಟದಲ್ಲಿ ಪಾಲ್ಗೊಳ್ಳು ವಂತಾಗಬೇಕು. ನಮ್ಮ ಬೇಡಿಕೆಯನ್ನು ಕೇಳದಿದ್ದರೆ ಒಲಿದು ಬರುವದಿಲ್ಲ. ಆದ್ದರಿಂದ ಈ ಹೋರಾಟವನ್ನು ಬಲಿಷ್ಠಗೊಳಿಸಬೇಕಾಗಿದೆ. ದ.ಕೊಡಗಿನ ಗ್ರಾಮೀಣ ಭಾಗ ಹಾಗೂ ಗಡಿಭಾಗದ ಬಹಳಷ್ಟು ಜನರು ರೈತರಾಗಿದ್ದು, ಪ್ರತಿಯೊಂದಕ್ಕೂ ತಾಲೂಕು ಕಛೇರಿಯಲ್ಲಿ ವಿವಿಧ ದಾಖಲಾತಿ ಹಾಗೂ ಇತರ ಕೆಲಸಕ್ಕಾಗಿ ತೆರಳÀಬೇಕಾಗುತ್ತದೆ. ದೂರದ ವೀರಾಜಪೇಟೆ ತಾಲೂಕು ಕೇಂದ್ರಕ್ಕೆ ತೆರಳಿ ಕೆಲಸ ಮಾಡಿಸಿಕೊಂಡು ಬರುವದು ತುಂಬಾ ತ್ರಾಸದಾಯಕ ವಾಗಿದೆ. ಅದ್ದರಿಂದ ಎಲ್ಲಾ ಅನುಕೂಲಗಳಿರುವ ಪೊನ್ನಂಪೇಟೆ ತಾಲೂಕು ರಚನೆಯಾಗಬೇಕೆಂದು ಒತ್ತಾಯಿಸಿದರು.

ಬಿರುನಾಣಿ ಪೂಕಳ ಶ್ರೀ ದಾರಾ ಮಹಾದೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ ಕಳೆದ 30 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಇದುವರೆಗೆ 115ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗವಹಿಸಿ ಬೆಂಬಲ ನೀಡಿವೆ. ಈ ಹೋರಾಟ ಒಂದೆರಡು ದಿನಕ್ಕೆ ಸೀಮಿತವಾಗದೆ ತಾಲೂಕು ರಚನೆಯಾಗುವವರೆಗೆ ನಡೆಸ ಬೇಕಾಗಿದೆ. ಸರ್ಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ನೂತನ ತಾಲೂಕು ವ್ಯಾಪ್ತಿಗೆ ಒಳಪಡುವ 21 ಗ್ರಾ.ಪಂ.ನ ಜನರನ್ನು ಸೇರಿಸಿ ಮುಂದಿನ ಹೋರಾಟದ ರೂಪುರೇಷೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಪೊನ್ನಂಪೇಟೆ ಗಣಪತಿ ನಗರದ ಕಾವೇರಿ ಕೊಡವ ಕೂಟದ ಅಧ್ಯಕ್ಷ ಕಟ್ಟೇರ ಲಾಲಪ್ಪ ಮಾತನಾಡಿ ನೂತನ ತಾಲೂಕು ರಚನೆಗೆ ಬೇಕಾಗುವ ಎಲ್ಲಾ ಮಾನದಂಡಗಳು ಪೊನ್ನಂಪೇಟೆ ಯಲ್ಲಿದೆ. ತಹಶೀಲ್ದಾರರ ಕಛೇರಿ, ಸರ್ವೆ ಕಛೇರಿ ಮತ್ತು ಬಿಓ ಕಛೇರಿ ಮಾತ್ರ ಅಗತ್ಯವಿದೆ. ಎಲ್ಲಾ ಮೂಲ ಸೌಕರ್ಯವಿದ್ದರೂ ತಾಲೂಕು ರಚನೆಗೆ ಮುಂದಾಗಿಲ್ಲ. ಸರ್ಕಾರ ತಾಲೂಕು ರಚನೆಗೆ ಮಾನ್ಯತೆ ನೀಡಬೇಕು ಎಂದರು.

ಪೊನ್ನಂಪೇಟೆ ಹಿರಿಯ ನಾಗರಿಕ ಸಮಿತಿಯ ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ ಮಾತನಾಡಿ ಕೊಡಗಿಗೆ ಯಾವದೇ ಸರ್ಕಾರ ಒಳ್ಳೆದು ಮಾಡಿಲ್ಲ. ತಾಲೂಕು ಹೋರಾಟ 2001ರಿಂದಲೇ ಇದ್ದರೂ ಇದುವರೆಗೆ ಹಲವು ಸರ್ಕಾರಗಳು ಆಡಳಿತ ಮಾಡಿವೆ. ಎಲ್ಲಾ ಸರ್ಕಾರಗಳು ತಾಲೂಕು ರಚನೆ ಬಗ್ಗೆ ನಿರ್ಲಕ್ಷ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾತನಾಡಿ ತಾ.ಪಂ ಸಾಮಾನ್ಯ ಸಭೆಯಲ್ಲಿ ತಾಲೂಕು ರಚನೆಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ. ತಾಲೂಕು ಹೆಚ್ಚಿದಷ್ಟು ಆಡಳಿತ ಮಾಡಲು ಅನುಕೂಲವಾಗಲಿದ್ದು, ಅಭಿವೃದ್ಧಿ ಕಾರ್ಯಕ್ರಮಕ್ಕೆ ಪೂರಕವಾಗಿದೆ ಎಂದು ಹೇಳಿದರು.

ತಾಲೂಕು ಹೋರಾಟ ಸಮಿತಿ ಸಂಚಾಲಕ ಎಂ.ಎಂ. ರವೀಂದ್ರ, ಪೊನ್ನಪೇಟೆಯ ನಿವೃತ್ತ ಮುಖ್ಯಶಿಕ್ಷಕ ಪಿ.ಪಿ. ಪ್ರಭಾಕರ್, ಚೆಪ್ಪುಡೀರ ಪೊನ್ನಪ್ಪ, ಪೊನ್ನಂಪೇಟೆ ಗಣಪತಿ ನಗರ ಸ್ಥಾಪಕರಾದ ಮುಕ್ಕಾಟೀರ ಗಣಪತಿ ಮುಂತಾದವರು ಮಾತನಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ಸತ್ಯಾಗ್ರಹದಲ್ಲಿ ಪೂಕಳ ದಾರಾ ಮಹಾದೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಅಣ್ಣಳಮಾಡ ಗಣಪತಿ, ಖಜಾಂಚಿ ಕರ್ತಮಾಡ ಅಜಿತ್, ಸದಸ್ಯರು ಹಾಗೂ ಗ್ರಾಮಸ್ಥರು, ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್‍ನ ಎಂ.ಎನ್. ತನೋಜ್, ಪೂಣಚ್ಚ, ಸತೀಶ್, ಬಿ.ಸಿ. ಗಿರೀಶ್, ಬಿ.ಡಿ. ಜಾನಕಿ, ವಿನು ಪ್ರಭಾಕರ್, ತುಳಸಿ ಕಾರ್ಯಪ್ಪ, ಎ.ಎನ್. ಮುತ್ತಮ್ಮ, ಐ.ಟಿ. ಸರಳ, ಎ.ಪಿ. ಸಾವಿತ್ರಿ, ಮಾಣೀರ ಸಂಜು, ಬೋಡಂಗಡ ನರೇಂದ್ರ ಹಾಗೂ ಸದಸ್ಯರು, ಪೊನ್ನಂಪೇಟೆ ಕಾವೇರಿ ಕೊಡವ ಕೂಟದ ಕಾರ್ಯದರ್ಶಿ ಕೇಳಪಂಡ ಭೀಮಯ್ಯ, ಪ್ರಮುಖರಾದ ಪಂದ್ಯಂಡ ಹರೀಶ್, ಮುದ್ದಿಯಡ ಸೋಮಯ್ಯ, ಮಲ್ಲಂಗಡ ಕುಂಞಪ್ಪ, ಅಜ್ಜಮಾಡ ಮೀರಾ, ಅಣ್ಣೀರ ರೋಹಿಣಿ ಉತ್ತಪ್ಪ, ಪೋರಂಗಡ ಸುಧಾ ಭೀಮಯ್ಯ, ತೀತಿರ ಜಯ, ಕೊಟ್ಟಂಗಡ ಬೋಪಯ್ಯ, ಡಾಲಿ, ಬಿರುನಾಣಿ ಗ್ರಾ.ಪಂ ಸದಸ್ಯೆ ಚೆಟ್ಟಂಗಡ ಪುಷ್ಪ, ಅಣ್ಣಳಮಾಡ ರಾಯಿ ಚಿಣ್ಣಪ್ಪ, ಕಾಳಿಮಾಡ ರವೀಂದ್ರ ಸೇರಿದಂತೆ ನೂರಾರೂ ಜನರು ಪಾಲ್ಗೊಂಡಿದ್ದರು. ಈ ಸಂದರ್ಭ ಉಪತಹಶೀಲ್ದಾರ್ ರಾಧಾಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.