ಕುಶಾಲನಗರ, ನ 30: ಕುಶಾಲನಗರ ಗೌಡ ಸಮಾಜದ ವತಿಯಿಂದ ಹುತ್ತರಿ ಅಂಗವಾಗಿ ತಾ3 ರಂದು ಕದಿರು ತೆಗೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ತಿಳಿಸಿದರು.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುತ್ತರಿ ಅಂಗವಾಗಿ ಅಂದು ಸಂಜೆ 7.30 ಕ್ಕೆ ಗೌಡ ಸಮಾಜದ ಸಭಾಂಗಣದಲ್ಲಿ ನೆರೆಕಟ್ಟಿ ಮೆರವಣಿಗೆ ಮೂಲಕ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಲಾಗುವದು. ನಂತರ ಸ್ಥಳೀಯ ಪ್ರಥಮ ದರ್ಜೆ ಕಾಲೇಜು ಬಳಿಯ ಸಮಾಜದ ಗದ್ದೆಯಲ್ಲಿ ಕದಿರು ತೆಗೆಯಲಾಗುವದು. ಗಣಪತಿ ದೇವಾಲಯಕ್ಕೆ ಕದಿರು ಸಮರ್ಪಿಸಿದ ಬಳಿಕ ಗೌಡ ಸಮಾಜದಲ್ಲಿ ಕದಿರು ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಹುತ್ತರಿ ಅಂಗವಾಗಿ ಸಮಾಜದ ಆಶ್ರಯದಲ್ಲಿ ಆಟೋಟ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಂತೋಷಕೂಟ ಹಮ್ಮಿಕೊಳ್ಳಲಾಗಿದೆ. ಡಿ.17 ರಂದು ಸ್ಥಳೀಯ ಜಿಎಂಪಿ ಶಾಲಾ ಮೈದಾನದಲ್ಲಿ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 23 ರಂದು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು 24 ರಂದು ಸಂತೋಷಕೂಟ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ, ಕುಶಾಲನಗರ ಡಿವೈಎಸ್ಪಿ ಪಿ.ಕೆ.ಮುರಳೀಧರ್, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಪಾಲ್ಗೊಳ್ಳಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಮುದಾಯ ಬಾಂಧವರು 15 ರ ಒಳಗಾಗಿ ಹೆಸರು ನೊಂದಾಯಿಸಿ ಕೊಳ್ಳಬೇಕೆಂದು ಅವರು ತಿಳಿಸಿದರು. ಹೆಸರು ನೊಂದಾಯಿಸಿಕೊಳ್ಳುವವರು ಸೂದನ ಗೋಪಾಲ-9845962401, ಪಟ್ಟಂದಿ ಬೀನಾ-9481772247, ಬೈಮನ ಬೋಜಮ್ಮ-9481058457, ಮಾಡನ ಶಶಿ-9481832763 ಗೆ ಸಂಪರ್ಕಿಸಲು ಅವರು ಕೋರಿದ್ದಾರೆ.

ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಬೈಮನ ಪೊನ್ನಪ್ಪ, ಸಹ ಕಾರ್ಯದರ್ಶಿ ಹಾಲುಗುಂಜ ಕೃಷ್ಣಮೂರ್ತಿ, ಯುವಕ ಸಂಘದ ಅಧ್ಯಕ್ಷ ಪಂಜಿಪಳ್ಳ ಯತೀಶ್ ಇದ್ದರು.