ಸೋಮವಾರಪೇಟೆ, ನ. 30: ಮಧ್ಯವರ್ತಿಗಳ ದರ್ಬಾರಿನಿಂದಲೇ ತುಂಬಿ ಹೋಗಿದ್ದ ಇಲ್ಲಿನ ತಾಲೂಕು ಕಚೇರಿಯ ಸುಧಾರಣೆಗೆ ತಹಶೀಲ್ದಾರ್ ಮುಂದಾಗಿದ್ದು, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ಅಳವಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ತಾಲೂಕು ಕಚೇರಿಯಲ್ಲಿನ ಮಧ್ಯವರ್ತಿಗಳ ಹಾವಳಿ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿ ವರ್ಗ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ನಿನ್ನೆಯಷ್ಟೇ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಚೇರಿ ಸಿಬ್ಬಂದಿಗಳಿಗೆ ನೀತಿಪಾಠ ಮಾಡಿ, ಬ್ರೋಕರ್‍ಗಳಿಗೆ ಅವಕಾಶ ನೀಡದಂತೆ ತಾಕೀತು ಮಾಡಿದ್ದರು.

ಇದೀಗ ತಾಲೂಕು ಕಚೇರಿಯ ಬಾಗಿಲ ಬಳಿಯಲ್ಲಿಯೇ ನೂತನವಾಗಿ ಬ್ಯಾನರ್ ಅಳವಡಿಸಲಾಗಿದ್ದು, ಇದರಲ್ಲಿ ‘ಕಚೇರಿ ಕೆಲಸ ಕಾರ್ಯಗಳನ್ನು ಮಧ್ಯವರ್ತಿಗಳ ಮೂಲಕ ಮಾಡಿಸಿಕೊಳ್ಳದೇ ನೇರವಾಗಿ ತಹಶೀಲ್ದಾರ್ ಅಥವಾ ಶಿರಸ್ತೇದಾರ್‍ರನ್ನು ಭೇಟಿ ಮಾಡಿ ಮಾಡಿಸಿಕೊಳ್ಳುವದು ಎಂದು ಈ ಮೂಲಕ ತಿಳಿಯಪಡಿಸಿದೆ. ಈ ಕಚೇರಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇರುವದಿಲ್ಲ’ ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ಈ ಸೂಚನೆ ಕೇವಲ ಬ್ಯಾನರ್‍ಗೆ ಮಾತ್ರ ಸೀಮಿತವಾಗದೆ ಆಡಳಿತದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಸಾರ್ವಜನಿಕರೂ ಸಹ ತಮ್ಮ ಕೆಲಸ ಕಾರ್ಯಗಳಿಗೆ ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಮಧ್ಯವರ್ತಿಗಳಿಗೆ ಕಡಿವಾಣ ಹಾಕಬೇಕಿದೆ.