ಗೋಣಿಕೊಪ್ಪಲು, ನ. 29: ಗೋಣಿಕೊಪ್ಪಲು ಎಪಿಎಂಸಿ ಯಾರ್ಡ್‍ನಲ್ಲಿ ಸುಮಾರು 31 ವರ್ಷಗಳಿಂದ ವೀರಾಜಪೇಟೆ ತಾಲೂಕಿನ ಅಡಿಕೆ ವಹಿವಾಟು ನಡೆಯುತ್ತಿದ್ದು, ಅಡಿಕೆ ಬೆಳೆಗಾರರಿಂದ ಪೈಪೋಟಿ ದರದಲ್ಲಿ ಅಡಿಕೆ ಖರೀದಿಸಲಾಗುತ್ತಿದೆ. ಎಪಿಎಂಸಿ ವರ್ತಕರ ಸಂಘದಲ್ಲಿ ಇದೀಗ 50ಕ್ಕೂ ಅಧಿಕ ಅಡಿಕೆ ವರ್ತಕರು ಎಪಿಎಂಸಿ ಯಾರ್ಡ್‍ನಲ್ಲಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಇತ್ತೀಚೆಗೆ ಟಿ. ಶೆಟ್ಟಿಗೇರಿಯ ಕೆಲವು ವ್ಯಕ್ತಿಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೆ.ಕೆ. ಬೆಳ್ಳಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಗೋಣಿಕೊಪ್ಪಲು ಎಪಿಎಂಸಿ ಯಾರ್ಡ್‍ನಲ್ಲಿ ಕಾನೂನು ಬದ್ಧವಾಗಿ ಲೈಸನ್ಸ್ ಹೊಂದಿದ ವರ್ತಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ‘ಸೆಸ್’ ಪಾವತಿಸಿ ಅಡಿಕೆ ವಹಿವಾಟು ನಡೆಸುತ್ತಾ ಬಂದಿದ್ದಾರೆ. ಅಡಿಕೆ ಕೃಷಿಕರಿಗೆ ಮುಂಗಡ ಹಣ ನೀಡುವದು, ಉತ್ತಮ ದರದಲ್ಲಿ ಖರೀದಿ ಹಾಗೂ ಖರೀದಿದಾರರ ಸಮ್ಮುಖದಲ್ಲಿಯೇ ಅಡಿಕೆ ಖರೀದಿ ಪ್ರಕ್ರಿಯೆ ನಡೆಯುತ್ತಿದೆ.

ಅಡಿಕೆ ದರದಲ್ಲಿ ಪೈಪೋಟಿ ಇದ್ದು, ಕೃಷಿಕರು ಉತ್ತಮ ದರದಲ್ಲಿ ತಮಗೆ ಇಷ್ಟಬಂದ ವರ್ತಕರಿಗೆ ಅಡಿಕೆ ಮಾರಾಟ ಮಾಡಲು ಅವಕಾಶವಿದೆ.

ಟಿ. ಶೆಟ್ಟಿಗೇರಿಯ ಕೆಲವು ಗ್ರಾ.ಪಂ. ಸದಸ್ಯರು ಹಾಗೂ ಇತರರು ಕಾನೂನು ಬಾಹಿರವಾಗಿ, ಲೈಸನ್ಸ್ ಇಲ್ಲದೆ ಅಡಿಕೆ ವಹಿವಾಟು ನಡೆಸುತ್ತಿರುವದು ನಮ್ಮ ಗಮನಕ್ಕೆ ಬಂದಿದೆ. ಇದೀಗ ಎಪಿಎಂಸಿ ಯಾರ್ಡ್‍ನಲ್ಲಿ ಕೆಜಿಗೆ ರೂ. 37 ರಂತೆ ನಾಟಿ ಅಡಿಕೆ ಖರೀದಿ ಮಾಡಲಾಗುತ್ತಿದೆ. ಮಂಗಳ, ಮಲಬಾರ್ ಅಡಿಕೆಗೂ ನಮ್ಮಲ್ಲಿ ಉತ್ತಮ ದರ ನೀಡಲಾಗುತ್ತಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿಯಮಾವಳಿ ಪ್ರಕಾರ ವರ್ತಕರು ಲೈಸನ್ಸ್ ಹೊಂದುವದು ಕಡ್ಡಾಯ ಹಾಗೂ ಎಪಿಎಂಸಿ ಯಾರ್ಡ್‍ಗೆ ಅಡಿಕೆ ತಂದು ‘ಸೆಸ್’ ಪಾವತಿಸಿ ಹೊರ ಜಿಲ್ಲೆಗೆ ಸಾಗಾಟ ಮಾಡಬಹುದಾಗಿದೆ.

ಪ್ರತಿ ವರ್ಷ ಅಕ್ಟೋಬರ್‍ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಅಡಿಕೆ ವ್ಯಾಪಾರ ನಡೆಯುತ್ತಿದ್ದು, ಇಲ್ಲಿನ ವರ್ತಕರ ಸಂಘಟಿತ ಪ್ರಯತ್ನದಿಂದ ಕೆಜಿಗೆ ರೂ.2 ಇದ್ದ ಅಡಿಕೆ ಬೆಲೆ ಇದೀಗ ರೂ. 37ಕ್ಕೆ ಏರಿದೆ. ಎಪಿಎಂಸಿ ಯಾರ್ಡ್‍ಗೆ ಹೊರ ಜಿಲ್ಲೆಯಿಂದ ಬರುವ ಖರೀದಿದಾರರು ಉತ್ತಮ ಬೆಲೆಗೆ ಅಡಿಕೆ ಖರೀದಿಸುತ್ತಿದ್ದಾರೆ. ಆದರೆ, ಟಿ. ಶೆಟ್ಟಿಗೇರಿಯ ಕೆಲವು ವ್ಯಕ್ತಿಗಳು ಅಡಿಕೆ ಕೆಜಿಗೆ ರೂ. 8 ರಿಂದ ರೂ. 10 ಲಾಭವಿದೆ ಎಂದು ಸುಳ್ಳು ಮಾಹಿತಿಯೊಂದಿಗೆ ಆತಂಕ ಸೃಷ್ಟಿಸುತ್ತಿದ್ದಾರೆ. ಎಪಿಎಂಸಿ ‘ಸೆಸ್’ ಪಾವತಿಸದೆ ಅಕ್ರಮವಾಗಿ ಹೊರ ಜಿಲ್ಲೆಗೆ ಅಡಿಕೆ ಸಾಗಾಟ ಮಾಡಲಾಗುತ್ತಿದೆ ಎಂದರು. ಅಡಿಕೆಯನ್ನು ಬಲಿತ ನಂತರ ಮೂರು ಹಂತದಲ್ಲಿ ಕೊಯ್ಲು ಮಾಡಿದರೆ ಬೆಳೆಗಾರರಿಗೆ ಅಧಿಕ ಲಾಭ. ಗೋಣಿಕೊಪ್ಪಲು ಎಪಿಎಂಸಿ ವರ್ತಕರ ಸಂಘದಿಂದ ವಾರ್ಷಿಕ 65 ಸಾವಿರ ಕ್ವಿಂಟಾಲ್ ವಹಿವಾಟು ನಡೆಯುತ್ತಿದೆ ಎಂದು ವಿವರಿಸಿದರು.

ಎಪಿಎಂಸಿ ಸಭಾಂಗಣದಲ್ಲಿ ನಡೆದ ಗೋಷ್ಠಿಯಲ್ಲಿ ವರ್ತಕರ ಸಂಘದ ಅಧ್ಯಕ್ಷ ಬೆಳ್ಳಿಯಪ್ಪ, ಉಪಾಧ್ಯಕ್ಷ ಕೇಕಮಾಡ ಸಾಬು ದೇವಯ್ಯ, ನಿರ್ದೇಶಕರಾದ ಪಂದ್ಯಂಡ ಮನು ಸೋಮಯ್ಯ, ಗುಮ್ಮಟ್ಟೀರ ದರ್ಶನ್, ಕೃಪಾ ಕಾವೇರಪ್ಪ, ನೂರೇರ ಅಚ್ಚಪ್ಪ, ನೂರೇರ ರಂಜಿ, ಕಟ್ಟೇರ ಜೀವನ್, ಕೆ.ಕೆ. ಅಪ್ಪಣ್ಣ, ಪೆಮ್ಮಂಡ ಪೂಣಚ್ಚ, ಕಾಡ್ಯಮಾಡ ಲಾಲಾ, ಚಾರಿಮಂಡ ಮನುದೇವಯ್ಯ ಉಪಸ್ಥಿತರಿದ್ದರು.