ಮಣಿ ಉತ್ತಪ್ಪ

ಸುಂಟಿಕೊಪ್ಪ, ನ. 29: ಕರಿಮೆಣಸು ಹಾಗೂ ಹಣ್ಣಿನ ಬೆಳೆಯಿಂದ ಬೆಳೆಗಾರರ ಅರ್ಥಿಕ ಮಟ್ಟ ಸುಧಾರಿಸಲಿದೆ. ಕೃಷಿಯೇ ರೈತರ ಜೀವಾಳ ಕಾರ್ಮಿಕರು ಸಹ ಕೊಡಗಿನಲ್ಲಿ ಕೃಷಿ ಚಟುವಟಿಕೆಯ ಬೆಳವಣಿಗೆಗೆ ಕೈಜೋಡಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರಪೇಟೆ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಸುಂಟಿಕೊಪ್ಪ ವಲಯ ಕೇಂದ್ರಿಯ ತೋಟಗಾರಿಕಾ ಪ್ರಯೋಗಿಕ ಕೇಂದ್ರ ಚೆಟ್ಟಳ್ಳಿ ಇದರ ಸಹಯೋಗದಲ್ಲಿ ಕಾಳುಮೆಣಸು ಮತ್ತು ಹಣ್ಣಿನ ಬೆಳೆಗಳ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೊಡಗಿನ ಕೃಷಿ ಭೂಮಿಯನ್ನು ಮೂಲ ನಿವಾಸಿಗಳು ಮಾರಾಟ ಮಾಡಿ ಬೇರೆಡೆ ತೆರಳ ಬಾರದೆಂದು ಕಿವಿಮಾತು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ಎಸ್. ಸೀತಾರಾಮ ಶೆಟ್ಟಿ ಮಾತನಾಡಿ, ಕೃಷಿಕರು ಕಠಿಣ ಶ್ರಮದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ನಿರೀಕ್ಷಿತ ಫಲ ಸಿಗಲಿದೆ. ಕೃಷಿಯನ್ನು ಲಾಭವಿಲ್ಲವೆಂದು ಮಧ್ಯದಲ್ಲೆ ಕೈಬಿಟ್ಟರೆ ಅದರಿಂದ ಪ್ರಯೋಜನ ಸಿಗದು. ಈಗ ಕೃಷಿಗೆ ಯಂತ್ರೋಪಕರಣಗಳು ಬಳಸು ವದರಿಂದ ಖರ್ಚು ಕಡಿಮೆಯಾಗಲಿದ್ದು, ಆದಾಯ ಪಡೆಯಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ರೈತರ ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಸಮಾರಂಭದ ಉದ್ಘಾಟನೆ ನೆರವೇರಿಸಿದ ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕೆ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ. ಐ.ಎನ್. ದೊರೆಯಪ್ಪಗೌಡ 1 ಎಕರೆ ಜಾಗದಲ್ಲಿ ಬೇರೆ ಬೇರೆ ಹಣ್ಣಿನ ಬೆಳೆಗಳನ್ನು ಬೇಸಾಯ ಮಾಡುವದರಿಂದ ಅಧಿಕ ಲಾಭಗಳಿಸಬಹುದೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷೆ ವತ್ಸಲಾ ವಹಿಸಿ ಮಾತನಾಡಿದರು.

ಕಾಳುಮೆಣಸು ಮತ್ತು ಹಣ್ಣಿನ ಬೆಳೆಗಳಾದ ಲಿಚ್ಚೆ, ಕಿತ್ತಳೆ, ರಾಂಬುವನ, ಬಟರ್ ಫ್ರೂಟ್, ಕಾಚಪುಳಿ, ಮಾರ್‍ಗೊಸ್‍ಲಿಮ್, ಚಕೋತ, ಫ್ಯಾಷನ್ ಫ್ರೂಟ್, ಮಲೆಯಾನ್ ಆಪ್ಲ್ಯೂ, ಅಣಬೆ ಬೇಸಾಯ ಇವುಗಳ ಬಗ್ಗೆ ವಿಚಾರಗೋಷ್ಠಿಯಲ್ಲಿ ಅಪ್ಪಂಗಳದ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಧಾನ ವಿಜ್ಞಾನಿ ಅಂಕೇಗೌಡ, ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕಾ ಪ್ರಾಯೋಗಿಕ ಸಸ್ಯಕೋಶದ ತಜ್ಞ ಡಾ. ವೆಂಕಟ ರಮಣಪ್ಪ, ಸುಂಟಿಕೊಪ್ಪ ಸಹಾಯಕ ತೋಟಗಾರಿಕಾ ಅಧಿಕಾರಿ ಶರತ್ ಮಾಹಿತಿ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗರಹಳ್ಳಿ ಸ್ವಸಹಾಯ ಸಂಘದ ಸೇವಾ ಪ್ರತಿನಿಧಿ ಸಂಧ್ಯಾ ಪ್ರಾರ್ಥಿಸಿ, ಸಂಘದ ಸಂಯೋಜಕಿ ಗೀತಾ ನಿರೂಪಿಸಿ, ಮೇಲ್ವಿಚಾರಕಿ ಸರಸ್ವತಿ ವಂದಿಸಿದರು.