ಮಡಿಕೇರಿ, ನ. 29: ಕೊಡಗು ಜಿಲ್ಲೆಗೆ ಪಿ.ಎಂ.ಜಿ.ಎಸ್.ವೈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕಳೆದ 3 ವರ್ಷಗಳಲ್ಲಿ ನೀಡಿರುವ ಅನುದಾನವೆಷ್ಟು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿಧಾನ ಮಂಡಲ ಅಧಿವೇಶನಲ್ಲಿ ಮಾಹಿತಿ ಬಯಸಿದರು. ಇದಕ್ಕೆ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಪಿ.ಎಂ.ಜಿ.ಎಸ್.ವೈ. ಯೋಜನೆ ಯಡಿ ಕೊಡಗು ಜಿಲ್ಲೆಗೆ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನದ ವಿವರ ನೀಡಿ 2014-15 ರಲ್ಲಿ ಮಡಿಕೇರಿಗೆ ರೂ. 552.16 ಲಕ್ಷ, ವೀರಾಜಪೇಟೆಗೆ ರೂ. 249.48 ಲಕ್ಷ, 2015-16 ರಲ್ಲಿ ಮಡಿಕೇರಿಗೆ ರೂ. 633.95 ಲಕ್ಷ, ವೀರಾಜಪೇಟೆಗೆ ರೂ. 226.6 ಲಕ್ಷ, 2016-17 ರಲ್ಲಿ ಮಡಿಕೇರಿಗೆ ರೂ. 477.87 ಲಕ್ಷ ಹಾಗೂ ವೀರಾಜಪೇಟೆ ತಾಲೂಕಿಗೆ ರೂ. 774.85 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಪಿಎಂಜಿಎಸ್‍ವೈ-1ರ ಹಂತ 6 ರಡಿ ಕೈಗೊಂಡ ಸೋಮವಾರಪೇಟೆ ತಾಲೂಕಿನ ನಾಕೂರು-ಶಿರಂಗಾಲ ರಸ್ತೆ (ಕೆ.ಎನ್.18-06) ಕಾಮಗಾರಿಯ ಬಗ್ಗೆ ಕಳಪೆ ಯಾಗಿದೆ ಎಂದು ದೂರು ಬಂದ ಕಾರಣ ಲೋಕಾಯುಕ್ತ ವತಿಯಿಂದ 2009 ರ ಡಿಸೆಂಬರ್ 9 ರಂದು ತಪಾಸಣೆ ನಡೆಸಿ, ಕಾಮಗಾರಿ ಯಲ್ಲಿನ ಲೋಪ ದೋಷಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟವರ ಮೇಲೆ ಆರೋಪ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಅದರಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ಪ್ರಕರಣವು ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ.

ಗುತ್ತಿಗೆ ಕರಾರಿನ ಒಟ್ಟು ಮೊತ್ತ ರೂ. 131.48 ಲಕ್ಷಗಳಲ್ಲಿ ಇದುವರೆಗೆ ರೂ. 91.09 ಲಕ್ಷಗಳು ಪಾವತಿಯಾಗಿರುತ್ತದೆ. ಕಾಮಗಾರಿ ಯಲ್ಲಿನ ಲೋಪ ದೋಷಗಳ ಬಗ್ಗೆ ತನಿಖೆ ನಡೆದು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುವದರಿಂದ ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮಾಡಿರುವದಿಲ್ಲ.

ನ್ಯಾಯಾಲಯದ ಅಂತಿಮ ತೀರ್ಪಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವದು. ಗುತ್ತಿಗೆದಾರರ ಭದ್ರತಾ ಠೇವಣಿ ಹಾಗೂ ಪರ್‍ಪಾರ್ಮೆನ್ಸ್ ಸೆಕ್ಯೂರಿಟಿ ಮೊತ್ತ ಸೇರಿ ಒಟ್ಟು ರೂ. 11,40,500 ಇಲಾಖೆಯಲ್ಲಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಮಾಹಿತಿ ನೀಡಿದ್ದಾರೆ.