ಮಡಿಕೇರಿ, ನ. 29: ಮೈಸೂರಿನಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕವಿಗಳು ಕವನ ವಾಚನ ಮಾಡಿದರು. ಶಕ್ತಿ ಉಪ ಸಂಪಾದಕ ಕುಡೆಕಲ್ ಸಂತೋಷ್ ಅವರು ತಮ್ಮ ಕವನದ ಮೂಲಕ ಕೊಡಗಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಕುಶಾಲನಗರದ ಕವಯತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಅವರು ತಮ್ಮ ಕವನದಲ್ಲಿ ಬಡತನದ ಬೇಗೆಯ ಬಗ್ಗೆ ಮನದಾಳದ ಭಾವನೆಗಳನ್ನು ತೆರೆದಿಟ್ಟರು.
ಸನ್ಮಾನ: ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ, ಕೊಡಗು ಜಿಲ್ಲಾ ಮಹಿಳಾ ಬರಹಗಾರ್ತಿಯರ ಸಂಘದ ಅಧ್ಯಕ್ಷೆಯಾಗಿರುವ ಕಸ್ತೂರಿ ಗೋವಿಂದಮ್ಮಯ್ಯ ಅವರನ್ನು ಜಿಲ್ಲೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಇನ್ನಿತರ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಸನ್ಮಾನಿತರ ಪರಿಚಯ
1962 ಡಿಸೆಂಬರ್‍ನಲ್ಲಿ ಹಿಂದಿ ಶಿಕ್ಷಕಿಯಾಗಿ ಶಿಕ್ಷಣ ಇಲಾಖೆಗೆ ಸೇರಿ, 1986ರ ವರೆಗೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. 1986ರಲ್ಲಿ ಕನ್ನಡ ಪದವೀಧರ ಶಿಕ್ಷಕಿಯಾಗಿ ಈಗಿನ ಜೂನಿಯರ್ ಕಾಲೇಜಿಗೆ ಬಡ್ತಿ. ನಂತರ 1991ರಿಂದ ಅಲ್ಲಿಯೇ ಪಿಯು ವಿಭಾಗಕ್ಕೆ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿ 2001ನೇ ಇಸವಿ ನವೆಂಬರ್‍ನಲ್ಲಿ ನಿವೃತ್ತಿ.
ಕತೆ-ಕಾದಂಬರಿ ಓದುವ ಹವ್ಯಾಸ ಚಿಕ್ಕಂದಿನಿಂದಲೇ ಇದ್ದ ಕಾರಣ, ಬರವಣಿಗೆಯು ಅಭ್ಯಾಸ. ವಿದ್ಯಾರ್ಥಿಯಾಗಿದ್ದಾಗಲೇ ಆಟೋಟ ಸ್ಪರ್ಧೆಯಲ್ಲಿ ಆಸಕ್ತಿ ನೌಕರಿಯಲ್ಲಿರುವಾಗ ಸರಕಾರಿ ನೌಕರರ ಕ್ರೀಡಾ ಕೂಟದಲ್ಲಿ ಭಾಗಿಯಾಗಿ ಜಿಲ್ಲಾಮಟ್ಟ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸುವಿಕೆ.
ಬರವಣಿಗೆಯು ಜೊತೆ ಜೊತೆಯಾಗಿ ಬೆಳೆಸಿಕೊಂಡು, ದಿನಪತ್ರಿಕೆಗಳಿಗೆ ಲೇಖನ, ಕತೆ, ಕವನಗಳನ್ನು ಬರೆಯುವ ಹವ್ಯಾಸ ಇಂದಿಗೂ ಇದೆ. ಕೊಡವ ಹಾಗೂ ಕನ್ನಡ ಭಾಷೆಯಲ್ಲಿ ಪುಸ್ತಕ ಪ್ರಕಟಣೆಯಾಗಿದೆ.
ಕೊಡವ ಭಾಷೆಯಲ್ಲಿ ‘ಅದ್ಯತೆ ಮೊಟ್ಟ್, ಬೀಂದ್ ಮೊಗ್ಗ್, ಭಾರತೀಸುತಂಡ ಬದ್‍ಕ್ ಬರಹ, ಅವ್ವನ ತುದ್‍ಚಿತ್, ಅವ್ವಂಗಾಯಿತ್. ಕನ್ನಡದಲ್ಲಿ ಮೌನ ಮಾತಾದಾಗ (ಕಥಾ ಸಂಕಲನ), ಕಧಾ ಚೊಪ್ಪೆ (ಕಥಾ ಸಂಕಲನ) ಪುಸ್ತಕಗಳು.
ಶಿಕ್ಷಕ ಶ್ರೀ ಪ್ರಶಸ್ತಿ, ಗೌರಮ್ಮ ದತ್ತಿನಿಧಿ ಪ್ರಶಸ್ತಿ, ಕೊಡವ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಲಭಿಸಿದೆ. ಕೊಡಗು ಜಿಲ್ಲಾ ಮಹಿಳಾ ಬರಹಗಾರ್ತಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.