ಸೋಮವಾರಪೇಟೆ, ನ. 29: ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಬರವಣಿಗೆಯತ್ತ ವಿಶೇಷ ಆಸಕ್ತಿ ವಹಿಸಿದರೆ ಉತ್ತಮ ಸಾಹಿತಿ, ಕವಿಗಳು ಹಾಗೂ ಲೇಖಕರಾಗಲು ಸಾಧ್ಯವಿದೆ ಎಂದು ಹಿರಿಯ ಸಾಹಿತಿ, ಜಾನಪದ ಪರಿಷತ್‍ನ ಹೋಬಳಿ ಉಪಾಧ್ಯಕ್ಷ ನ.ಲ. ವಿಜಯ ಹೇಳಿದರು.
ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ವತಿಯಿಂದ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಮತ್ತು ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪರಿಚಯಿಸಲು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕÉೂಳ್ಳುತ್ತಿರುವದು ಶ್ಲಾಘನೀಯ. ಮಕ್ಕಳಲ್ಲಿ ಭಾಷಾಭಿಮಾನ ಇದ್ದರೆ ಮಾತ್ರ ಭಾಷೆಯ ಬೆಳವಣಿಗೆ ಸಾಧ್ಯ. ಅದು ಹೃದಯದ ಭಾಷೆಯಾಗಿದ್ದು, ಅದನ್ನು ಪೋಷಿಸುವ ಕರ್ತವ್ಯ ನಮ್ಮದಾಗಬೇಕು. ಮಾತೃ ಭಾಷೆಯಲ್ಲಿ ಕಡ್ಡಾಯ ಶಿಕ್ಷಣ ನೀಡಿದರೆ ಸಾಲದು. ಭಾಷೆಯ ಬಗ್ಗೆ ಸಂಪೂರ್ಣ ಹಿಡಿತವನ್ನು ಹೊಂದುವತ್ತ ವಿದ್ಯಾರ್ಥಿಗಳು ಪ್ರಯತ್ನ ಪಡಬೇಕು. ಕನ್ನಡವು ನಮಗೆ ಅನ್ನ ನೀಡುವ ಭಾಷೆಯಾಗಿದ್ದು, ಭಾಷೆಯ ಉಳಿವಿಗಾಗಿ ನಾವು ಸಂಕಲ್ಪ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಆಯೋಜಕ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಎಂ.ಜೆ. ಅಣ್ಣಮ್ಮ ಮಾತನಾಡಿ, ನಮ್ಮ ಭಾಷೆಯ ಮೇಲೆ ನಮಗೆ ಪ್ರಭುತ್ವ ಇದ್ದಾಗ ಮಾತ್ರ ಬೇರೆ ಭಾಷೆಯನ್ನು ಸುಲಲಿತವಾಗಿ ಮಾತನಾಡಬಹುದು. ಭಾಷೆ ಎನ್ನುವದು ಒಂದು ಸಂವಹನ ಮಾಧ್ಯಮ. ಕನ್ನಡದ ಅಭಿಮಾನ ಕೇವಲ ನವೆಂಬರ್ ತಿಂಗಳಿಗೆ ಮೀಸಲಾಗಬಾರದು. ಅದು ಸಂಬಂಧ ವೃದ್ಧಿಸುವ ಭಾಷೆಯಾಗಿರು ವದರಿಂದ ನಿತ್ಯೋತ್ಸವ ಆಗಿರಬೇಕು ಎಂದರು. ಇಂದಿನ ಮಕ್ಕಳಲ್ಲಿ ಭಾಷಾಭಿಮಾನದ ಕೊರತೆ ಮೂಡಲು ಇಂದಿನ ಪರೀಕ್ಷಾ ಪದ್ಧತಿ ಮತ್ತು ಶಿಕ್ಷಣದ ವಿಧಾನಗಳು ಕಾರಣವಾಗಿವೆ. ಮಕ್ಕಳಲ್ಲಿ ಬರೆಯುವ ಕೌಶಲ್ಯವನ್ನು ಹೆಚ್ಚಿಸಬೇಕು ಆಗ ಮಾತ್ರ ಮಕ್ಕಳಲ್ಲಿ ಭಾಷಾಭಿಮಾನ ಮೂಡಲು ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಶಾಲ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಮಿತಿ ಸದಸ್ಯ ಯೊಗೇಶ್, ಯಡೂರು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಲ್.ಎಂ. ಪ್ರೇಮ, ಜಾನಪದ ಪರಿಷತ್‍ನ ಹೋಬಳಿ ಘಟಕದ ಕಾರ್ಯದರ್ಶಿ ರುಬೀನಾ, ಶಿಕ್ಷಕರಾದ ಮುರುಗೇಶ್, ರಮೇಶ್, ನಾಗೇಶ್, ಚಂದ್ರಕಲಾ, ರಾಜೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.
ಸಂವಿಧಾನ ದಿನಾಚರಣೆ ಅಂಗವಾಗಿ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಸ್ವರಚಿತ ಸಣ್ಣ ಕಥೆ ಓದುವದು, ಸ್ವರಚಿತ ಕವನ ವಾಚನ ಸ್ಪರ್ಧೆ, ನನ್ನ ನೆಚ್ಚಿನ ಕವಿ ಪರಿಚಯ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.